ನಿಷೇಧದ ನಡುವೆಯೂ ನಿರ್ಭಯಾ ಸಾಕ್ಷ್ಯಚಿತ್ರ ಪಸರಿಸಿದ ಬಿಬಿಸಿ

ಗುರುವಾರ, 5 ಮಾರ್ಚ್ 2015 (11:10 IST)
ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಯಾರಿಸಲಾಗಿದ್ದ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಬಾರದು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದ್ದರೂ ಕೂಡ ಬಿಬಿಸಿ ತನ್ನ ಪ್ರಸಾರದ ಒಂದು ಬಾಗವಾಗಿ ಪ್ರಸಾರ ಮಾಡಿದ್ದು, ಕಾನೂನಿಗೆ ಸವಾಲೊಡ್ಡಿದೆ. 
 
ಬಿಬಿಸಿ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಇಂಡಿಯನ್ ಡಾಟರ್ ಎಂಬ ಶೀರ್ಷಿಕೆಯಡಿಯಲ್ಲಿ ನಿನ್ನೆ ಇಂಗ್ಲೆಂಡಿನಾದ್ಯಂತ ತರಾತುರಿಯಾಗಿ ಪ್ರಸಾರ ಮಾಡಿದೆ. ಬಿಬಿಸಿ ವಾಹಿನಿಯು ಅಂತಾರಾಷ್ಟ್ರೀಯ ವಾಹಿನಿಯಾಗಿದ್ದು, ಹಲವು ರಾಷ್ಟ್ರಗಳಲ್ಲಿ ತನ್ನ ಪ್ರಸಾರದ ಹಕ್ಕನ್ನು ಹೊಂದಿದೆ. ಇಲ್ಲದೆ ಹೈಕೋರ್ಟ್ ಆದೇಶ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಸಾರ ಮಾಡಿರಬಹುದು ಎನ್ನಲಾಗುತ್ತಿದೆ.
 
ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ಪ್ರಸಾರ ಮಾಡದಂತೆ ನಿಷೇಧ ಹೇರಿತ್ತು. ಅಲ್ಲದೆ ಕೇಂದ್ರ ಗೃಹ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳವಂತೆ ಸೂಚಿಸಿತ್ತು. ಇದಕ್ಕೂ ಮುನ್ನ ಕೇಂದ್ರ ಸರ್ಕಾರವೇ ಖುದ್ದು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ರಾಷ್ಟ್ರವಷ್ಟೇ ಅಲ್ಲದೆ ವಿದೇಶಗಳಿಗೂ ಮನವಿ ಮಾಡಿತ್ತು. ರಾಷ್ಟ್ರಾದ್ಯಂತ ಕಾನೂನಾತ್ಮಕವಾಗಿ ಆದೇಶ ಹೊರಡಿಸಿದ್ದ ಗೃಹ ಸಚಿವ ರಾಜನಾಥ್ ಸಿಂಗ್, ನಿರ್ಭಯಾ ಪ್ರಕಱಣದ ಆರೋಪಿ ಸಂದರ್ಶನವಿರುವ ತುಣುಕನ್ನು ಪಸರಿಸಬಾರದು. ಪ್ರಸಾರ ಮಾಡಿದಲ್ಲಿ ಅಂತಹ ಮಾಧ್ಯಮಗಳ ಕಾರ್ಯಕ್ರಮ ನಿರ್ಮಾಪಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆದೇಶ ಹೊರಡಿಸಿದ್ದರು. ಇಷ್ಟಲ್ಲದೆ ಪ್ರಸಾರವನ್ನು ತಡೆಗಟ್ಟುವ ಬಗ್ಗೆ ರಾಜನಾಥ್ ನಿನ್ನೆ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದರು. 
 
ಪ್ರಕರಣವು ನ್ಯಾಯಾಲಯದಲ್ಲಿದ್ದರೂ ಕೂಡ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಸರ್ಕಾರ ಕಾನೂನನ್ನು ಉಲ್ಲಂಘಿಸಿದೆ ಎಂದು ಸದನದಲ್ಲಿ ಕಳೆದ ಮೂರು ದಿನಗಳಿಂದ ವಿರೋಧ ಪಕ್ಷಗಳು ಕ್ಯಾತೆ ತೆಗೆದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಸಾರಕ್ಕೆ ತಡೆಯೊಡ್ಡಿತ್ತು. ಬಿಬಿಸಿಯ ಪ್ರಸಾರ ನಿರ್ಧಾರಕ್ಕೆ ವಿರೋಧ ಪಕ್ಷಗಳ ಪ್ರತಿನಿಧಿಗಳಷ್ಟೇ ಅಲ್ಲದೆ, ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. 
 
ಇನ್ನು ಪ್ರಸಾರ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಅನಾಮಧೇಯ ವ್ಯಕ್ತಿ ಎಂಬಂತೆ ಈಗಾಗಲೇ ಲೆಸ್ಲಿ ವಿರುದ್ಧ ದೂರು ದಾಖಲಾಗಿದೆ ಎನ್ನಲಾಗಿದೆ. ಜೊತೆಗೆ ನಿರ್ಮಾಪಕಿ ಲೆಸ್ಲಿ, ಸಂದರ್ಶನಕ್ಕೆಂದು ಭಾರತಕ್ಕೆ ಆಗಮಿಸುವ ವೇಳೆ ವೀಸಾ ಪಡೆಯುವಲ್ಲಿಯೂ ಕೂಡ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. 
 
ಪ್ರಕರಣದ ಹಿನ್ನೆಲೆ ಏನು ?: ಪ್ರಕರಣದ ಆರೋಪಿಗಳಲ್ಲೋರ್ವನಾಗಿರುವ ಮುಖೇಶ್ ಸಿಂಗ್(ಬಸ್ ಚಾಲಕ) ಎಂಬಾತನನ್ನು ಇತ್ತೀಚೆಗೆ ಬಿಬಿಸಿ ವರದಿಗಾರರು ಜೈಲಿನಲ್ಲಿಯೇ ಸಂದರ್ಶನ ಮಾಡಿದ್ದರು. ಸಂದರ್ಶನದಲ್ಲಿ ಆರೋಪಿ ಸಿಂಗ್, ಅತ್ಯಾಚಾರ ಎಸಗುವಾಗ ಅವಳು(ನಿರ್ಭಯಾ) ವಿರೋಧಿಸದೆ ಸಹಕರಿಸಿದ್ದಿದ್ದರೆ ಅವಳನ್ನು ಅಮಾನುಷವಾಗಿ ಹತ್ಯೆ ಮಾಡುತ್ತಿರಲಿಲ್ಲ. ಅಲ್ಲದೆ ಸಭ್ಯ ಮಹಿಳೆಯರು ರಾತ್ರಿ 9 ಗಂಟೆ ವೇಳೆಯಲ್ಲಿ ಅಲೆಯುವುದು ಸರಿಯಲ್ಲ. ಅತ್ಯಾಚಾರ ವಿಷಯದಲ್ಲಿ ಯುವತಿಗೂ ಕೂಡ ಯುವಕನಷ್ಟೇ ಜವಾಬ್ದಾರಿ ಇರುತ್ತದೆ. ಯುವತಿಯರಿಗೆ ಮನೆಗೆಲಸ ಮೀಸಲಾಗಿದೆ. ಆದರೆ ಅದನ್ನು ಬಿಟ್ಟು ಡಿಸ್ಕೋಗಳಲ್ಲಿ, ಬಾರ್‌ಗಳಲ್ಲಿ ಯುವಕರ ಜೊತೆ ಅಲೆಯುತ್ತಾರೆ. ಅಲ್ಲದೆ ಅಶ್ಲೀಲ ಉಡುಪುಗಳನ್ನು ಧರಿಸುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದ. 
 
ಈ ಸಂದರ್ಶನದ ತುಣುಕನ್ನು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುವ ಹಿನ್ನೆಲೆಯಲ್ಲಿ ಅಂದು ಪ್ರಸಾರ ಮಾಡುವುದಾಗಿ ತಿಳಿಸಿತ್ತು. ಇದಕ್ಕೆ ವಿರೋಧ ಪಕ್ಷಗಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆದ್ದರಿಂದ ಕೇಂದ್ರ ಸರ್ಕಾರ ಪ್ರಸಾರಕ್ಕೆ ತಡೆಯೊಡ್ಡಿತ್ತು. ಈ ನಡುವೆಯೂ ಬಿಬಿಸಿ ಇಂಗ್ಲೆಂಡ್‌ನಲ್ಲಿ ಪ್ರಸಾರ ಮಾಡುವ ಮೂಲಕ ಕಾನೂನಿಗೆ ಸವಾಲು ಹಾಕಿದೆ.

ವೆಬ್ದುನಿಯಾವನ್ನು ಓದಿ