ಆನ್‍ಲೈನ್‍ನಲ್ಲಿ ಅಪರಿಚಿತರ ಗೆಳೆತನ ಬೆಳೆಸುವಾಗ ಇರಲಿ ಎಚ್ಚರ

ಶನಿವಾರ, 18 ಫೆಬ್ರವರಿ 2017 (12:36 IST)
ಅರುಷಾ ಕಂಜಿಲಾಲ್ ಎಂಬ ಸಾಫ್ಟ್‌ವೇರ್ ತಂತ್ರಜ್ಞೆ, ತಮ್ಮ 13 ವರ್ಷದ ಮಗಳು, ಆಕೆಯ ಇತರೆ ಗೆಳತಿಯರಂತಲ್ಲ, ಇವಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತಿಯೇ ಇಲ್ಲ ಎಂದು ಹೆಮ್ಮೆಯಿಂದ ಇತರರಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ, ಇವರ ಮಗಳು ಅನನ್ಯಾ (ಹೆಸರು ಬದಲಿಸಲಾಗಿದೆ) ನಕಲಿ ಗುರುತಿನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಫೇಸ್ ಬುಕ್‍ನಲ್ಲಿ ಸಕ್ರಿಯವಾಗಿದ್ದಳು ಎಂಬ ಸಂಗತಿ ಅರಿವಿಗೆ ಬಂದು ಈ ಎಲ್ಲಾ ಕಲ್ಪನೆಗಳು ಕುಸಿದು ಬಿದ್ದವು. ಫೇಸ್‍ಬುಕ್‍ಗೆ ಸೈನಿಂಗ್ ಅಪ್ ಆಗಲು 13 ವರ್ಷಗಳು ಆಗಬೇಕಾಗಿರುವುದರಿಂದ ಆಕೆ ನಕಲಿ ಗುರುತಿನೊಂದಿಗೆ ಫೇಸ್‍ಬುಕ್ ಖಾತೆ ತೆರೆದಿದ್ದಳು. ವಿಪರ್ಯಾಸ ಎಂದರೆ, ಅನನ್ಯ ಇವರ ಫ್ರೆಂಡ್ಸ್ ಲಿಸ್ಟ್‍ನಲ್ಲಿ ಇದ್ದಳು. "ನಾನು ಫೇಸ್‍ಬುಕ್‍ನಲ್ಲಿ ಸಕ್ರಿಯವಾಗಿಯೇ ಇದ್ದೇನೆ. ನನ್ನ ಮಗಳು ನನ್ನ ಫ್ರೆಂಡ್ಸ್ ಲಿಸ್ಟ್‌ನಲ್ಲಿದ್ದಳು. ಆದರೆ ನನಗದು ತಿಳಿದಿರಲಿಲ್ಲ. ಆಕೆಯ ಆನ್‍ಲೈನ್ ಚಟುವಟಿಕೆಗಳ ಮೇಲೆ ನಾನು ಕಣ್ಣಿಡುವ ಬದಲಾಗಿ, ಆಕೆ ನನ್ನ ಪೆÇ್ರಫೈಲ್ ಅನ್ನು ಟ್ರಾಕ್ ಮಾಡುತ್ತಿದ್ದಳು ಮತ್ತು ನಕಲಿ ಹೆಸರಿನೊಂದಿಗೆ ನನ್ನಲ್ಲಿ ಚಾಟ್ ಮಾಡುತ್ತಿದ್ದಳು" ಎಂದು ಅರುಷಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ.
 
ಈಕೆಯೊಬ್ಬಳೇ ಅಲ್ಲ. ಇಂಟೆಲ್ ಸೆಕ್ಯೂರಿಟಿ ದೇಶಾದ್ಯಂತ ನಡೆಸಿರುವ ಸಮೀಕ್ಷೆಯು ತೋರಿಸಿದ್ದೇನೆಂದರೆ, 77%  ಮಕ್ಕಳು ವಯಸ್ಸು 13 ಆಗುವ ಮುನ್ನವೇ ಫೇಸ್‍ಬುಕ್ ಖಾತೆಗಳನ್ನು ತೆರೆದಿದ್ದಾರೆ. ಈ ಅಧ್ಯಯನವನ್ನು 2,370 ಮಂದಿಯ ಮೇಲೆ ನಡೆಸಲಾಗಿದೆ (1,185 ಮಕ್ಕಳು 8-18 ವರ್ಷ  ವಯಸ್ಸಿನ ನಡುವಿನವರು ಮತ್ತು 1,185 ಪೋಷಕರು). ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಮಕ್ಕಳಲ್ಲಿ, 69% ಮಂದಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. 42% ಮಂದಿ ತಮ್ಮ ಫೋನ್ ನಂಬರ್ ಹಾಕುತ್ತಾರೆ, 44% ಮಂದಿ ಆನ್‍ಲೈನ್‍ನಲ್ಲೇ ಮೊದಲು ಕಂಡವರನ್ನು ಭೇಟಿ ಮಾಡಲಿದ್ದಾರೆ ಅಥವಾ ಭೇಟಿ ಮಾಡಿಯಾಗಿದೆ ಎಂದು ತೋರಿಸುತ್ತದೆ  ಮತ್ತು ಅಪರಿಚತರೊಂದಿಗಿನ ಸಂಭಾಷಣೆಯು ಮಕ್ಕಳನ್ನು ಅಪಾಯಕ್ಕೀಡು ಮಾಡಬಹುದು.
 
ಇನ್ನೊಂದು ಉದಾಹರಣೆ ತೆಗೆದುಕೊಳ್ಳುವುದಾದರೆ, 16 ವರ್ಷದ ರೇಯಾ (ಹೆಸರು ಬದಲಿಸಲಾಗಿದೆ), ಫೇಸ್ ಬುಕ್ ನಲ್ಲಿ ಪರಿಚಿತನಾಗಿ ಸ್ನೇಹಿತನಾದ ವ್ಯಕ್ತಿಯೊಬ್ಬನ ಜತೆ ತನ್ನ ಡೆಬಿಟ್ ಕಾರ್ಡ್ ಪಿನ್ ಹಂಚಿಕೊಂಡ ಪರಿಣಾಮ ಈಗ ಈಕೆ ದಿವಾಳಿಯಾಗಿದ್ದಾಳೆ. ಒಂದು ವರ್ಷದ ಆನ್‍ಲೈನ್ ಗೆಳೆತನದ ಬಳಿಕ, ರೇಯಾ ಆತನನ್ನು ಭೇಟಿ ಮಾಡಿದಾಗ, ತಾನು ಹಣಕಾಸು ಮುಗ್ಗಟ್ಟಿನಲ್ಲಿದ್ದೇನೆ ಎಂದು ಆಕೆಗೆ ಆತ ಹೇಳಿದ್ದಾನೆ. ಆತನನ್ನು ನಂಬಿ, ಆತ ಸ್ವಲ್ಪ ಹಣ ವಿತ್ ಡ್ರಾ ಮಾಡಿಕೊಳ್ಳಲಿ ಎಂದು ಇವಳು ತನ್ನ ಡೆಬಿಟ್ ಕಾರ್ಡ್ ಪಿನ್ ಕೊಡುತ್ತಾಳೆ. ಆದರೆ ಆ ಗೆಳೆಯ ಆಕೆಯ ಖಾತೆಯನ್ನು ಪೂರ್ತಿ ಖಾಲಿ ಮಾಡಿ ಮಾಯವಾಗುತ್ತಾನೆ.
 
ಸಾಮಾಜಿಕ ಜಾಲ ತಾಣವು ಅನೇಕ ನಕಲಿ ವ್ಯಕ್ತಿತ್ವಗಳು, ಸುಳ್ಳು ವಯಸ್ಸು, ಮತ್ತು ಸುಳ್ಳು ಫೋಟೋಗಳನ್ನು ಹೊಂದಿರುತ್ತದೆ...  ಯುವ ಜನಾಂಗ ಸುಲಭವಾಗಿ ಬಲಿ ಬೀಳಬಹುದು.
 
ಡಾ.ಎಂ.ಎಸ್.ಧರ್ಮೇಂದ್ರ, ಕನ್ಸಲ್ಟೆಂಟ್ ಮನಶಾಸ್ತ್ರಜ್ಞ, ಮಾನಸ ನ್ಯೂರೋಸೈಕಿಯಾಟ್ರಿಕ್ ಹಾಸ್ಪಿಟಲ್, ಮಾತನಾಡಿ, "ಇಂದಿನ ಹದಿಹರೆಯದವರು ತುಂಬಾ ಕುತೂಹಲಿಗಳು. ಇತರರ ಜೀವನದಲ್ಲಿ ಏನಾಗುತ್ತಿದೆ ಎಂದು ಅವರು ತಿಳಿಯಲು ಬಯಸುತ್ತಾರೆ. ಈ ಯುವಕರ ಜತೆ ಚಾಟ್ ಮಾಡಲು ಆರಂಭಿಸುವ ವ್ಯಕ್ತಿಗಳು ಮಕ್ಕಳನ್ನು ಹೇಗೆ ಆಕರ್ಷಿಸಬೇಕು ಎಂದು ತಿಳಿದಿರುವ ವೃತ್ತಿಪರರಾಗಿರುತ್ತಾರೆ. ಹಾಗಾಗಿ ಇವರು ಸುಲಭವಾಗಿ ಟ್ರಾಪ್ ಆಗುತ್ತಾರೆ" ಎಂದು ಹೇಳುತ್ತಾರೆ.
 
ಸೈಂಟ್ ಮಾರ್ಥಾಸ್ ಹಾಸ್ಪಿಟಲ್ ನಲ್ಲಿ ಮನಶಾಸ್ತ್ರದ ಎಚ್‍ಒಡಿ ಆಗಿರುವ, ಡಾ.ಅಜಿತ್ ಭಿಡೆ, ಅವರ ಬಳಿಗೆ ಪ್ರತಿ ತಿಂಗಳು, ಆನ್‍ಲೈನ್‍ನಲ್ಲಿ ಅಪರಿಚಿತರನ್ನು ಭೇಟಿಯಾದ 12 ಮಂದಿ ರೋಗಿಗಳು ಬರುತ್ತಾರೆ. "ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆನ್‍ಲೈನ್‍ನಲ್ಲಿ ಅಪರಿಚಿತರೊಂದಿಗೆ ಚಾಟ್ ಮಾಡುತ್ತಾರೆ. ನಿಜ ಜೀವನದಲ್ಲಿ ಉತ್ತಮ ಗೆಳೆಯರನ್ನುಆಯ್ಕೆ ಮಾಡಲು ಕಷ್ಟವೆಂದು ಅನ್ನಿಸಿದಾಗ ಅವರು ಆನ್‍ಲೈನ್‍ನಲ್ಲಿ ಸಮಾನ ಮನಸ್ಕ ಜನರನ್ನು ಹುಡುಕುತ್ತಾರೆ. ಕೆಲವೊಮ್ಮೆ ಎಳೆಯರೂ ಅಪರಿಚಿತರೊಂದಿಗೆ ಮಾತನಾಡುತ್ತಾರೆ ಮತ್ತು ಅವರತ್ತ ಆಕರ್ಷಿತರಾಗುತ್ತಾರೆ ಮತ್ತು ಅವರನ್ನು ಭೇಟಿ ಮಾಡಲು ಒಪ್ಪುತ್ತಾರೆ. ಇವರು ಸಾಮಾನ್ಯವಾಗಿ ತಾವು ಭೇಟಿಯಾಗುವ ವ್ಯಕ್ತಿಯ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ಹೊಂದಿರುತ್ತಾರೆ. ಕಲ್ಪನೆಗಳು ಈಡೇರದೇ ಹೋದಾಗ ಅವರು ಬೇಸರಗೊಳ್ಳುತ್ತಾರೆ ಮತ್ತು ಗಂಭೀರ ಹೆಜ್ಜೆಗಳನ್ನಿಡುತ್ತಾರೆ" ಎಂದು ಡಾ.ಭಿಡೆ ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ