ತಂದೆಯನ್ನು ಹತ್ಯೆಗೈದ ಅಮೆರಿಕದ ವಿರುದ್ಧ ಸೇಡು ಖಚಿತ; ಒಸಾಮಾ ಪುತ್ರ ಹಮ್ಜಾ ಬಿನ್ ಲಾಡೆನ್

ಸೋಮವಾರ, 11 ಜುಲೈ 2016 (14:26 IST)
ಜಾಗತಿಕ ಉಗ್ರಗಾಮಿ ಸಂಘಟನೆ ಅಲ್‌ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದ ಅಮೆರಿಕದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಗುಡುಗಿದ್ದಾನೆ.
 
ನಾವೆಲ್ಲರು ಒಸಾಮಾರಂತೆ. ಅಮೆರಿಕ ಮತ್ತು ಮಿತ್ರ ದೇಶಗಳ ವಿರುದ್ಧ ಉಗ್ರವಾದದ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿರುವ ಹಮ್ಜಾ ನೀಡಿದ ಹೇಳಿಕೆಯ ವಿಡಿಯೋ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಸೈಟ್ ಇಂಟಲಿಜೆನ್ಸ್ ಗುಂಪು ಪ್ರಕಟಿಸಿದೆ. 
 
ಮುಸ್ಲಿಂ ರಾಷ್ಟ್ರಗಳಾದ ಪ್ಯಾಲೇಸ್ತೇನ್, ಅಫ್ಘಾನಿಸ್ಥಾನ, ಸಿರಿಯಾ, ಇರಾಕ್, ಯೆಮನ್, ಸೋಮಾಲಿಯಾ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ಬಗ್ಗೆ ನೀವು ಎಸಗುತ್ತಿರುವ ದೌರ್ಜನ್ಯಕ್ಕೆ ನಿಮ್ಮ ದೇಶದಲ್ಲಿಯೇ ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಅಮೆರಿಕೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ. 
 
2001ರಲ್ಲಿ ಸೆಪ್ಟೆಂಬರ್ 11 ರಂದು ಅಮೆರಿಕದ ಮೇಲೆ ನಡೆದ ಉಗ್ರರ ದಾಳಿಯ ರೂವಾರಿಯಾಗಿದ್ದ ಒಸಾಮಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನದಲ್ಲಿ ಅಡಗಿದ್ದಾಗ 2011 ರಲ್ಲಿ ಅಮೆರಿಕದ ಕಮಾಂಡೋಗಳು ಹತ್ಯೆ ಮಾಡಿದ್ದರು.
 
ಇರಾನ್‌ನಲ್ಲಿ ಗೃಹ ಬಂಧನದಲ್ಲಿರುವ ಒಸಾಮಾ ಪುತ್ರ ಹಮ್ಜಾ ಬಿನ್ ಲಾಡೆನ್‌ ನೇತೃತ್ವದಲ್ಲಿ ಉಗ್ರರು ಮತ್ತೆ ಒಂದಾಗುತ್ತಿದ್ದಾರೆ ಎಂದು ಗುಪ್ತಚರ ದಳದ ಮೂಲಗಳು ಬಹಿರಂಗಪಡಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ