ಪರಿಸರ ಸ್ನೇಹಿ ವಿದ್ಯುತ್‌ಗೆ ಹಾರಾಡೋ ಚಿಟ್ಟೆಯೇ ಸ್ಫೂರ್ತಿ!

ಗುರುವಾರ, 20 ಅಕ್ಟೋಬರ್ 2016 (16:37 IST)
ಅಮೇರಿಕಾ: ಮನುಷ್ಯ ದಿನನಿತ್ಯದ ಜೀವನಕ್ಕಾಗಿ ಭೂ ಗರ್ಭದಲ್ಲಿ ಸಿಗುವ ಕಲ್ಲಿದ್ದಲು, ಪೆಟ್ರೋಲಿಯಂನಂತಹ ಇಂಧನಗಳ ಮೇಲೆಯೇ ವರ್ಷಾನು ವರ್ಷಗಳಿಂದ ಅವಲಂಬಿಸಿದ್ದಾನೆ. ಮಿತಿಮೀರಿದ ಇದರ ಬಳಕೆ ಕಡಿಮೆ ಮಾಡಲು ಸೌರಶಕ್ತಿಯನ್ನೂ ಕಂಡು ಹಿಡಿದ. ಆದರೆ ಇದಕ್ಕೆ ಪರಿಹಾರ ನಮ್ಮ ಕಣ್ಣ ಮುಂದೆಯೇ ಹಾರಾಡುತ್ತಿದೆ.
ಏನಪ್ಪಾ... ಈ ವಿಶೇಷ ಅಂತೀರಾ? ಹಾಗಾದರೆ ವಿಜ್ಞಾನಿಗಳ ಈ ಚಿಕ್ಕ ಸಂಶೋಧನಾ ಲೇಖನ ಓದಿರಿ.
 
ನಮ್ಮ ಕಣ್ಮುಂದೆಯೇ ಪಟಪಟನೆ ಹಾರಾಡುವ ಚಿಟ್ಟಿಗಳು ಚಳಿಗಾಲದ ಸಂದರ್ಭದಲ್ಲಿ ತಮ್ಮ ದೇಹವನ್ನು ಬೆಚ್ಚಗಾಗಿಸಿಕೊಳ್ಳಲು ರೆಕ್ಕೆಗಳನ್ನು ಬಿಸಿಲಿಗೆ ತೆರೆದಿಡುತ್ತವೆ. ಅದರಲ್ಲೂ ಸ್ವಾಲೋ ಜಾತಿಯ ಕೆಲವು ಚಿಟ್ಟೆಗಳ ರೆಕ್ಕೆಗಳಿಗೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಸಾಮರ್ಥ್ಯ ತುಸು ಹೆಚ್ಚೇ ಇರುತ್ತದೆ. ಈ ಸಾಮರ್ಥ್ಯಕ್ಕೆ ಮುಖ್ಯ ಕಾರಣ ಅವುಗಳ ರೆಕ್ಕೆಗಳಲ್ಲಿನ ಕಪ್ಪುಬಣ್ಣ ವಲ್ಲ, ವಿಭಿನ್ನವಾದ ರೆಕ್ಕೆಗಳ ರಚನೆಯಾಗಿದೆ.
 
ಚಿಟ್ಟೆಗಳ ರೆಕ್ಕೆಗಳಲ್ಲಿ ಒಂದರ ಮೇಲೊಂದರಂತೆ ಸಾಲಾಗಿ ಜೋಡಿಸಿರುವ ಚಿಕ್ಕ ಪ್ರುಗಳಿವೆ. ಅವು ಬರಿಗಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತವೆ. ಈ ಸೂಕ್ಷ್ಮ ಪದರಗಳ ಕೆಳ ಭಾಗದಲ್ಲಿ ವಿ ಆಕಾರ ಗೆರೆಗಳಿವೆ. ಅವುಗಳ ಮಧ್ಯದಲ್ಲಿ ಜೇನುಗೂಡಿನಂಥ ಅಸಂಖ್ಯಾತ ಕೋಟಿ ರಂಧ್ರಗಳಿವೆ. ಇದರಿಂದ ಬೆಳಕು ರೆಕ್ಕೆಯ ಮೇಲೆ ಬಿದ್ದಾಕ್ಷಣ, ಈ ಗೆರೆಗಳು ಬೆಳಕನ್ನು ರಂಧ್ರಗಳಿಗೆ ಹರಿಯುವಂತೆ ಮಾಡುತ್ತವೆ. ಈ ಕ್ರಿಯೆಯಿಂದಲೇ ಚಿಟ್ಟೆಯ ರೆಕ್ಕೆಗಳು ಕಡುಕಪ್ಪಾಗಿ ಕಾಣುವಂತೆ ಮಾಡುತ್ತದೆ. ಜತೆಗೆ ಇದು ಚಿಟ್ಟೆಯ ಇಡೀ ದೇಹವನ್ನು ಬೆಚ್ಚಗಾಗಿಡುತ್ತದೆ.

ಪರಿಸರದಲ್ಲಿಯೇ ಅತೀ ಸೂಕ್ಷ್ಮ ರಚನೆ ಚಿಟ್ಟೆಯ ರೆಕ್ಕೆಗಳಲ್ಲಿವೆ ಎನ್ನುವ ವಿಜ್ಞಾನಿಗಳ ಸಂಶೋಧನೆ ಹೇಳುತ್ತದೆ. ಈ ರಚನೆಯ ತಂತ್ರಜ್ಞಾನದಿಂದ ನೀರು ಮತ್ತು ಸೂರ್ಯನ ಬೆಳಕಿನಿಂದ ಹಸಿರು(ಪರಿಸರ ಸ್ನೇಹಿ) ಇಂಧನವಾದ ಜಲಜನಕ ಉತ್ಪಾದಿಸಬಹುದೆನ್ನುವುದು ವಿಜ್ಞಾನಿಗಳ ಚಿಂತನೆ. ಆ ನಿಟ್ಟಿನಲ್ಲಿ ಅವರನ್ನು ಹಾರಾಡುವ ಚಿಟ್ಟೆ ಪ್ರೇರೇಫಿಸಿ, ಸ್ಫೂರ್ತಿ ತುಂಬಿದೆ ಎಂದು ಸೈನ್ಸ್ ಡೈಲಿ ಎಂಬ ವಾರ್ತಾ ಮಾಧ್ಯಮ ವರದಿ ಮಾಡಿದೆ.
 
ನೀರಿಲ್ಲದೆ ಜಲವಿದ್ಯುತ್ ಉತ್ಪಾದನೆ ಕ್ಷೀಣಿಸುತ್ತಿದ. ಸೌರ ವಿದ್ಯುತ್ ಬಳಕೆ ಇದೆಯಾದರೂ, ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲ. ಇನ್ನು ಪವನಶಕ್ತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹೀಗಿದ್ದಾಗ ವಿಜ್ಞಾನಿಗಳ ಈ ನೂತನ ಸಂಶೋಧನೆ ಹೊಸ ಆವಿಷ್ಕಾರಕ್ಕೆ ನಾಂದಿಯಾಗಲಿದೆ. ಅದು ಕೂಡಾ ಪರಿಸರ ಸ್ನೇಹಿ ವಿದ್ಯುತ್ ಬಳಕೆಗೆ ಎನ್ನುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ