ಯಾರೇರುತ್ತಾರೆ ಸೈಕಲ್? ಅಪ್ಪಾನಾ, ಮಗನಾ?

ಸೋಮವಾರ, 9 ಜನವರಿ 2017 (09:23 IST)
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೂ ಅಪ್ಪ- ಮಗನ ನಡುವೆ ನಡೆಯುತ್ತಿರುವ ಬಿಕ್ಕಟ್ಟು ಮಾತ್ರ ಕೊನೆಗೊಂಡಿಲ್ಲ. ಸಮಾಜವಾದಿ ಪಕ್ಷದಲ್ಲಿನ ರಾಜಕೀಯ ಶೀತಲ ಸಮರ ಮುಂದುವರೆದಿದ್ದು ಎರಡು ಬಣಗಳಾಗಿ ಒಡೆದು ಹೋಗಿವೆ.
ಮತ್ತೀಗ ಪಕ್ಷದ ಚಿಹ್ನೆಗಾಗಿ ಅಪ್ಪ- ಮಗನಲ್ಲಿ ಹಗ್ಗ- ಜಗ್ಗಾಟ ಆರಂಭವಾಗಿದ್ದು ಸೈಕಲ್ ತನ್ನದು ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದರೆ, ಮುಖ್ಯಮಂತ್ರಿ ಅಖಿಲೇಶ್ ಸೈಕಲ್ ತಮಗೆ ಸೇರಿದ್ದು ಎಂದು ವಾದಿಸುತ್ತಿದ್ದಾರೆ. 
 
ಸೈಕಲ್ ತಮಗೆ ಸೇರಬೇಕು ಎಂಬುದಕ್ಕೆ ಅಖಿಲೇಶ್ ಚುನಾವಣಾ ಆಯೋಗಕ್ಕೆ ದಾಖಲೆ ಪತ್ರ ಸಲ್ಲಿಸಿದ್ದಾರೆ. ಆದರೆ ಅವೆಲ್ಲ ನಕಲಿ ದಾಖಲೆಗಳು ಎನ್ನುತ್ತಿರುವ ಮುಲಾಯಂ ಸೈಕಲ್ ತಮಗೆ ಸೇರಬೇಕು ಎನ್ನುತ್ತಿದ್ದಾರೆ. 
 
ಸೈಕಲ್ ಹಕ್ಕು ಯಾರಿಗೆ ಸೇರಿದ್ದು ಎಂಬುದನ್ನು ನಿರ್ಣಯಿಸಲು, ತಮ್ಮ ತಮ್ಮ ವಾದಕ್ಕೆ ಪೂರಕವಾದ ಪ್ರಮಾಣ ಪತ್ರ ಸಲ್ಲಿಸುವಂತೆ ಚುನಾವಣಾ ಆಯೋಗ ನೀಡಿದ್ದ ಗಡುವು ಇಂದಿಗೆ ಕೊನೆಗೊಳ್ಳಲಿದ್ದು, ಯಾರು ಸೈಕಲ್ ಏರಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
 
ಎರಡು ಬಣಗಳ ನಡುವಿನ ತಮ್ಮ ವ್ಯತ್ಯಾಸಗಳನ್ನು ಪರಿಹರಿಸಲು ವಿಫಲಗೊಂಡರೆ ಚುನಾವಣಾ ಆಯೋಗ ಎರಡು ಬಣಕ್ಕೂ ಬೇರೆ ಬೇರೆ ಚಿಹ್ನೆ ನೀಡುವ ಸಾಧ್ಯತೆಗಳಿವೆ. 
 
ಇನ್ನೊಂದೆಡೆ ಈ ಎಲ್ಲ ಗಲಾಟೆಗೆ ಕಾರಣಕರ್ತ ಎಂಬ ಪಟ್ಟ ಹೊತ್ತಿರುವ ಅಮರ್ ಸಿಂಗ್ ಮೌನ ಮುರಿದಿದ್ದಾರೆ. ಪಕ್ಷಕ್ಕೆ ಒಳ್ಳೆಯದಾದರೆ ನಾನು ಎಂತಹ ತ್ಯಾಗಕ್ಕೂ ಸಿದ್ಧ. ಯಾದವ ಕುಟುಂಬದ ಏಕತೆಗೆ ಪಕ್ಷಕ್ಕೆ ರಾಜೀನಾಮೆ ನೀಡಲು ತಯಾರಾಗಿದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ