ಟರ್ಕಿಯ ಸಮುದ್ರ ತೀರಕ್ಕೆ ತೇಲಿಬಂದ ಸಿರಿಯಾದ ಮಗುವಿನ ಶವ

ಗುರುವಾರ, 3 ಸೆಪ್ಟಂಬರ್ 2015 (18:58 IST)
ಟರ್ಕಿಯ ಸಮುದ್ರ ದಂಡೆಯಲ್ಲಿ ಮಗುವೊಂದರ ನಿರ್ಜೀವ ಶವವೊಂದು ತೇಲಿಬಂದಿತ್ತು. ಟರ್ಕಿಯ ಪೊಲೀಸ್ ಅಧಿಕಾರಿಯ ಗಮನಕ್ಕೆ ಈ ಶವ ಬಂದಿತ್ತು. ಮರಳಿನಡಿ ಮುಖ ಕೆಳಗಾಗಿ ಬಿದ್ದಿದ್ದ ಮಗುವಿನ ಶವ ಮನಕಲಕುವಂತೆ ಮಾಡಿತು. ಕೆಂಪು ಶರ್ಟ್ ಮತ್ತು ನೀಲಿ ಚಡ್ಡಿ ಧರಿಸಿದ ಮಗುವನ್ನು 3 ವರ್ಷದ ಅಯ್ಲಾನ್ ಎಂದು ಗುರುತಿಸಲಾಗಿದೆ. ಅವನ ಸೋದರ ಐದರ ಪ್ರಾಯದ ಗಾಲಿಪ್ ಸಮುದ್ರ ದಂಡೆಯ ಇನ್ನೊಂದು ಬದಿಯಲ್ಲಿ ಬಿದ್ದಿದ್ದ.  ಸಿರಿಯಾದ ಸಾವಿರಾರು ನಿರಾಶ್ರಿತರು  ಮತ್ತು ವಲಸೆಗಾರರು ಸುರಕ್ಷತೆಯ ಯುರೋಪ್ ಮುಟ್ಟುವ ಹತಾಶ ಪ್ರಯತ್ನದಲ್ಲಿ ಅನೇಕ ಮಂದಿ ಸಾವನ್ನಪ್ಪುವ ಭಯಾನಕ ಘಟನೆಗೆ ಇದು ಸಾಕ್ಷಿಯಾಗಿತ್ತು.
 
ಅಯ್ಲಾನ್‌ನ ನಿರ್ಜೀವ ಶವದ ಚಿತ್ರ ಟರ್ಕಿಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತು. ಬಳಿಕ ಇಡೀ ಜಗತ್ತಿಗೆ ಅರಿವಾಯಿತು. ಆಕ್ರೋಶಿತ ವೀಕ್ಷಕರು, ಮಾನವ ಹಕ್ಕು ಕಾರ್ಯಕರ್ತರು ಇದನ್ನು ಪೋಸ್ಟ್ ಮಾಡಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದರು. ಸಿರಿಯಾದ ಸಂಘರ್ಷದಿಂದ, ಯುದ್ಧದಿಂದ ಬೇಸತ್ತು ಅಲ್ಲಿಂದ ಹೇಗಾದರೂ ಪಾರಾಗಬೇಕೆಂದು ದೋಣಿಯಲ್ಲಿ ಬಂದಿದ್ದ ಇವರ ಕುಟುಂಬ ಸಮುದ್ರ ಮಧ್ಯೆ ಅಲೆಗಳ ಹೊಡೆತಕ್ಕೆ ಮುಳುಗಿ 12 ಜನರು ಸಾವನ್ನಪ್ಪಿದ್ದರು. ಅದರಲ್ಲಿ ಸತ್ತಿರುವ 3 ವರ್ಷದ ಮಗು ಅಯ್ಲಾನ್ ಶವ ಟರ್ಕಿ ದಂಡೆಗೆ ತೇಲಿಬಂದಿತ್ತು.  
 
ಫ್ರೆಂಚ್ ಪ್ರಧಾನಮಂತ್ರಿ ಮ್ಯಾನ್ಯುಯಲ್ ವಾಲ್ಸ್ ಟರ್ಕಿಯ ಬೀಚ್‌ನಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿ ಸತ್ತ ಮಗುವಿನ ಶವವು ವಲಸೆಗಾರರ  ಬಿಕ್ಕಟ್ಟಿನ ಪರಿಹಾರಕ್ಕೆ ಯುರೋಪ್ ತಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯವನ್ನು ಸಾರಿ ಹೇಳುತ್ತದೆ ಎಂದಿದ್ದಾರೆ.  
 

ವೆಬ್ದುನಿಯಾವನ್ನು ಓದಿ