8ನೇ ವರ್ಷಕ್ಕೆ ಪ್ರೀತಿಸಿದವರು ಸಾವಿನಲ್ಲೂ ಜತೆ ನಡೆದರು

ಶನಿವಾರ, 4 ಜುಲೈ 2015 (12:20 IST)
ನಿಜ ಪ್ರೀತಿಗೆ ಸಾವಿಲ್ಲವೆನ್ನುತ್ತಾರೆ. ಅಂತೆಯೇ ಈ ದಂಪತಿಗಳು ಸಾವಿನಲ್ಲೂ ಜತೆಯಾಗಿ ನಡೆದು ಅನುಪಮ ಪ್ರೇಮದ ಧ್ಯೋತಕವೆನಿಸಿಕೊಂಡಿದ್ದಾರೆ. ಅದು ಕೂಡ ಸಂಗಾತಿಯನ್ನು ಬಟ್ಟೆ ಬದಲಿಸುವಂತೆ ಬದಲಿಸುವ ಪಾಶ್ಚಾತ್ಯ ರಾಷ್ಟ್ರದಲ್ಲಿ ಈ ಘಟನೆ ನಡೆದಿದೆ. 
 
 

ಅಮೇರಿಕಾದ ದಂಪತಿಗಳಿಬ್ಬರ ಪ್ರೀತಿ- ಅನುರಾಗದ ಸತ್ಯ ಕಥೆಯಿದು. 75 ವರ್ಷಗಳ ಸಾರ್ಥಕ್ಯ ದಾಂಪತ್ಯ ಜೀವನ ನಡೆಸಿದ ಅವರಿಬ್ಬರು ಸಾವಿನಲ್ಲೂ ನಿನಗೆ ನಾನು, ನನಗೆ ನೀನು ಎಂದು ನಡೆದಿದ್ದಾರೆ. ಪರಷ್ಪರರ ಕೈ ಹಿಡಿದುಕೊಂಡೇ ಜಿಯನೆಟ್ಟೆ (95) ಹಾಗೂ ಅಲೆಕ್ಸಾಂಡರ್‌‌‌ (95) ಪ್ರಾಣ ತ್ಯಜಿಸಿದ್ದಾರೆ. 
 
ಕನೆಕ್ಟಿಕಟ್‌‌‌‌ನ ಸ್ಟಾಮ್‌‌ಫೋರ್ಡ್‌ನಲ್ಲಿ 1919ರಲ್ಲಿ ಜನಿಸಿದ್ದ ಇವರಿಬ್ಬರು 8ರ ಪ್ರಾಯದಲ್ಲಿಯೇ ಡೇಟಿಂಗ್‌‌ ನಡೆಸಿದ್ದರು ಎನ್ನುತ್ತಾರೆ ಅವರ ಮಕ್ಕಳಾದ ರಿಚರ್ಡ್ ಮತ್ತು ಐಮಿ. 
 
1940ರಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟ ಅವರಿಬ್ಬರು 1970 ರಲ್ಲಿ ಸ್ಯಾನ್‌ಡಿಯಾಗೊಗೆ ವಾಸ ಬದಲಾಯಿಸಿದ್ದರು. ಒಬ್ಬರನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದ ಅವರಿಬ್ಬರು ಕೊನೆಯುಸಿರಿರುವವರೆಗೂ ಜತೆಯಾಗಿ ಇರಲು ನಿರ್ಧರಿಸಿದ್ದರು. 
 
ಸದ್ಯದಲ್ಲಿಯೇ ತಮ್ಮ 75ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂತೋಷದಲ್ಲಿದ್ದ ದಂಪತಿಗಳು ಜೂನ್ 17 ರಂದು ಒಟ್ಟಿಗೆ ಕೊನೆಯುಸಿರೆಳೆದಿದ್ದಾರೆ. ಅಲೆಕ್ಸಾಂಡರ್ ತನ್ನ ಪತ್ನಿಯ ತೋಳಲ್ಲಿಯೇ ಪ್ರಾಣ ತ್ಯಜಿಸಿದ್ದಾನೆ. 
 
ಪತಿಯನ್ನು ತಬ್ಬಿ ಹಿಡಿದು ಕುಳಿತಿದ್ದ ಜಿಯನೆಟ್ಟೆ ಬಳಿ ಬಂದ ಮಗಳು ತಂದೆ ಪ್ರಾಣ ತ್ಯಜಿಸಿರುವುದಾಗಿ ಹೇಳಿದ್ದಾಳೆ. ಆಗ ಆಕೆ, "ನೋಡು ನೀ ಬಯಸಿದ ಹಾಗೆ ಆಯಿತು. ನೀನು ನನ್ನ ತೋಳಲ್ಲಿ ಪ್ರಾಣ ಬಿಟ್ಟಿರುವೆ. ಐ ಲವ್ ಯೂ ಸ್ವಲ್ಪ ಕಾಯು, ಆದಷ್ಟು ಬೇಗ ನಿನ್ನನ್ನು ಸೇರುತ್ತೇನೆ", ಎಂದು ಹೇಳುತ್ತ ಹಾಗೆಯೇ ಪ್ರಾಣ ತ್ಯಜಿಸಿದ್ದಾಳೆ. 
 
ಜೂನ್ 29 ರಂದು ಅವರಿಬ್ಬರ ಮದುವೆಯ ವಾರ್ಷಿಕೋತ್ಸವ ದಿನದಂದೇದಂಪತಿಗಳನ್ನು ಮಣ್ಣು ಮಾಡಲಾಯಿತು ಎಂದು ಪುತ್ರಿ ಐಮಿ ತಿಳಿಸಿದ್ದಾಳೆ. 

ವೆಬ್ದುನಿಯಾವನ್ನು ಓದಿ