ನೇಪಾಳದಲ್ಲಿ ಭೂಕಂಪ: ದೊಡ್ಡಣ್ಣನಿಂದ 10 ಲಕ್ಷ ಡಾಲರ್ ನೆರವು

ಭಾನುವಾರ, 26 ಏಪ್ರಿಲ್ 2015 (17:30 IST)
ನೇಪಾಳದಲ್ಲಿ ಭಾರೀ ಪ್ರಮಾಣದ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ನೇಪಾಳಕ್ಕೆ ವಿಶ್ವದ ದೊಡ್ಡಣ್ಣ ಅಮೇರಿಕಾ 10 ಲಕ್ಷ ಡಾಲರ್ ತುರ್ತು ಪರಿಹಾರ ನಿಧಿ ಘೋಷಿಸಿದೆ. ಅಲ್ಲದೆ ನೇಪಾಳಕ್ಕೆ ಅಗತ್ಯ ಎನಿಸುವ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದೆ.

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಅಮೆರಿಕಾ ರಾಯಭಾರಿಗಳು ಈ ನೆರವನ್ನು ಘೋಷಿಸಿದ್ದಾರೆ. ಭೂಕಂಪ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಬೀದಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮಮ್ಮಲ ಮರುಗಿರುವ ಅಮೇರಿಕಾ ಸಹಾಯಸ್ತವನ್ನು ಚಾಚಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಯಭಾರಿ ಪೀಟರ್ ಬೊಡ್ಡೆ, ಸಂಕಷ್ಟಕ್ಕೆ ಸಿಲುಕಿರುವ ನೇಪಾಳದ ಜನತೆಯ ಸುರಕ್ಷತೆಗಾಗಿ ಅಮೆರಿಕಾ ಟೊಂಕ ಕಟ್ಟಿ ನಿಲ್ಲಲಿದೆ ಎಂದಿದ್ದಾರೆ.

ವಿಶೇಷ ಸಂಗತಿ ಎಂದರೆ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಅಮೆರಿಕಾ ಅಂತಾರಾಷ್ಟ್ರೀಯ ಸಂಸ್ಥೆಯು ನೇಪಾಳದ ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ಪರಿಹಾರ ತಂಡವನ್ನೂ ನೇಮಿಸಿದೆ.

ವೆಬ್ದುನಿಯಾವನ್ನು ಓದಿ