ಭೂಕಂಪನ: ನೇಪಾಳದ ಸ್ಥಿತಿ-ಗತಿ ಏನು ?

ಭಾನುವಾರ, 26 ಏಪ್ರಿಲ್ 2015 (11:40 IST)
ನೇಪಾಳದಲ್ಲಿ ನಿನ್ನೆ ಬೆಳಗ್ಗೆಯಿಂದ ನಿರಂತರವಾಗಿ ಭೂಮಿ ಕಂಪಿಸುತ್ತಿದ್ದು, ರಾಜಧಾನಿ ಕಠ್ಮಂಡುವಿನ ಹಲವು ಕಟ್ಟಡಗಳು ಕುಸಿದು ಅಗಾಧ ಪ್ರಮಾಣದ ಹಾನಿ ಸಂಭವಿಸಿದೆ.

ಪ್ರಸಕ್ತ ಸ್ಥಿತಿ ಮತ್ತು ಪರಿಣಾಮ:
-ಭೂ ಕಂಪನದ ಪರಿಣಾಮ ಕಠ್ಮಂಡು ಹಾಗೂ ಪೋಕ್ರಾಗಳಲ್ಲಿ ಸಾಕಷ್ಟು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಸಾಕಷ್ಟು ಮಂದಿ ಸಿಲುಕಿದ್ದ ಪರಿಣಾಮ 1900ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
-5000 ಮಂದಿಗೆ ಗಾಯಗಳಾಗಿದ್ದು, ಕಟ್ಟಡಗಳನ್ನು ಬಳಸದೆ ಮೈದಾನದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
-ಭೂಕಮಪ ಹಿನ್ನೆಲೆಯಲ್ಲಿ ನೇಪಾಳ ರಾಷ್ಟ್ರಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಭಾರತ ಸರ್ಕಾರವು ರಕ್ಷಣಾ ಹೊಣೆ ಹೊತ್ತು  ಮೈತ್ರಿ ಆಪರೇಷನ್ ಮೂಲಕ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ.  
-ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
-ಹವಾಮಾನದಲ್ಲಿಯೂ ವೈಪರೀತ್ಯತೆ ಉಂಟಾಗಿದ್ದು, ವಿಮಾನಯಾನಕ್ಕೆ ಅಡ್ಡಿಯುಂಟಾಗಿದೆ. ಅಲ್ಲದೆ ಇಲ್ಲಿನ ವಿಮಾನ ನಿಲ್ದಾಣದ ರನ್‌ ವೇಗಳೂ ಕೂಡ ಹಾನಿಗೊಳಗಾಗಿವೆ.
-ರಾಷ್ಟ್ರದ ಎಲ್ಲಾ ಶಾಲಾ-ಕಾಲೇಜುಗಳಿಗೆ 10 ದಿನಗಳ ಕಾಲ ರಜೆ ಘೋಷಿಸಲಾಗಿದೆ.
-ಹಾನಿಗೊಳಗಾದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾರ್ವಜನಿಕರನ್ನು ರಕ್ಷಿಸುವಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ಹಮ್ಮಿಕೊಂಡಿವೆ.

ಭಾರತದ ಪಾತ್ರ:
ಭಾರತ ಸಂರ್ಕಾರವು ರಕ್ಷಣಾ ಕಾರ್ಯಾಚರಣೆಯನ್ನು ಆಪರೇಶನ್ ಮೈತ್ರಿ ಎಂಬ ಹೆಸರಿನಲ್ಲಿ ನಡೆಸುತ್ತಿದ್ದು, ಭಾರತದಿಂದ ವಿಶೇಷ ವಿಮಾನಗಳಲ್ಲಿ ಆಹಾರ ಹಾಗೂ ಔಷಧಿಗಳನ್ನು ರವಾನಿಸಲಾಗಿದೆ. ಅಲ್ಲದೆ ಅಗತ್ಯಕ್ಕೆ ತಕ್ಕಂತೆ ವಾಯುಸೇನೆ, ವಿಪತ್ತು ನಿರ್ವಹಣಾ ತಂಡಗಳನ್ನು ಕಳುಹಿಸಿಕೊಡಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ವಿದ್ಯುತ್ ಸಮಸ್ಯೆ ಪ್ರಮುಖವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಭಾರತದಿಂದ ವಿಶೇಷ ತಜ್ಞರ ತಂಡವನ್ನೂ ಕಳುಹಿಸಲಾಗಿದೆ.  

ಇನ್ನು ನೇಪಾಳದ ವರ್ಲ್ಡ್ ಪೀಸ್ ಪಕೋಡಾ ಎಂಬ ಸ್ಥಳದಿಂದ ಸಾರ್ವಜನಿಕರೋರ್ವರು ವಿಡಿಯೋವೊಂದನ್ನು ಸೆರೆಹಿಡಿದು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು, ಜನತೆ ಪ್ರಸ್ತುತವೂ ಕೂಡ ಭಯಭೀತರಾಗಿದ್ದಾರೆ. ಅಲ್ಲದೆ ಮೈದಾನದಂತಹ ಸ್ಥಳಗಳಲ್ಲಿ ಗುಂಪು ಗುಂಪಾಗಿ ನಿಂತಿದ್ದು, ಭಯದಿಂದಲೇ ದಿನದೂಡುತ್ತಿದ್ದಾರೆ.  

ಘಟನೆ ವಿವರ: ಇಲ್ಲಿ ನಿನ್ನೆ ಬೆಳಗ್ಗೆ 11.45ರಿಂದ ನಿರಂತರವಾಗಿ ಭೂಕಂಪನ ಸಂಭವಿಸುತ್ತಿದ್ದು, ಇಲ್ಲಿಯವರೆಗೆ 50 ಭಾರಿ ಭೂಮಿ ನಡುಗಿದೆ. ರಿಕ್ಟರ್ ಮಾಪನದಲ್ಲಿ 7.9ರಷ್ಟು ತೀವ್ರತೆ ದಾಖಲಾಗಿದ್ದು, ಘಟನೆ ಪರಿಣಾಮ 1990ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 5000 ಮಂದಿ ಗಾಯಗೊಂಡಿದ್ದಾರೆ. ಆದ್ದರಿಂದ ಇದನ್ನು ಮಹಾ ಭೂಕಂಪ ಎಂದು ಹೇಳಲಾಗಿದೆ.

ಇತಿಹಾಸ: ನೇಪಾಳದಲ್ಲಿ ಈ ಹಿಂದೆಯೂ ಕೂಡ ಹಲವು ಬಾರಿ ಭೂಕಂಪನ ಸಂಭವಿಸಿತ್ತು. ಆದರೆ ಇಷ್ಟರ ಮಟ್ಟಿನ ಅನಾಹುತ 1934ರಲ್ಲಿ ಸಂಭವಿಸಿತ್ತು. ಅದರ ಬಳಿಕ ಇದೇ ಆಗಿದೆ. 1934ರಲ್ಲಿ 12000 ಮಂದಿ ಸಾವನ್ನಪ್ಪಿದ್ದರು. ಆಗ ಕಂಪನದ ತೀವ್ರತೆ ಭಾರತಕ್ಕೂ ವ್ಯಾಪಿಸಿದ್ದರಿಂದ ಉತ್ತರ ಭಾರತದ ಪೂರ್ವ ಭಾಗದ ರಾಜ್ಯವಾಗಿರುವ ಬಿಹಾರದಲ್ಲಿಯೂ ಕೂಡ 7000 ಮಂದಿ ಸಾರ್ವಜನಿಕರು ಸಾವನ್ನಪ್ಪಿದ್ದರು. ಆ ವೇಳೆ 8.7ರಷ್ಟು ತೀವ್ರತೆ ದಾಖಲಾಗಿತ್ತು.

ವೆಬ್ದುನಿಯಾವನ್ನು ಓದಿ