ಎಲ್ಲರಿಗೂ ಉದ್ಯೋಗ ಖಾತರಿ ಯೋಜನೆ ಪ್ರಯೋಜನಗಳ ಅರಿವಿದೆ, ಆದರೆ ಮೋದಿಗಿಲ್ಲ: ರಾಹುಲ್ ಗಾಂಧಿ

ಬುಧವಾರ, 3 ಫೆಬ್ರವರಿ 2016 (16:28 IST)
ಯುಪಿಎ ಸರ್ಕಾರ ಜಾರಿಗೆ ತಂದ ಜನಪ್ರಿಯ ಯೋಜನೆಯಾಗಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ನಿನ್ನೆ 10 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ ಯೋಜನೆಯ ಮಹತ್ವವನ್ನು ಅರಿತುಕೊಳ್ಳುವಲ್ಲಿ ಪ್ರಧಾನಿ ಮೋದಿಯವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 
 
ಈ ಯೋಜನೆಗೆ ಎಲ್ಲೆಡೆಗಳಿಂದ ಶ್ಲಾಘನೆ ಕಂಡು ಬರುತ್ತಿದ್ದರೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅಂತ್ಯ ಹಾಡಲು ಎನ್‌ಡಿಎ ಸರ್ಕಾರ ಬಯಸುತ್ತಿದೆ ಎಂದು  ಅವರು ಕಿಡಿಕಾರಿದ್ದಾರೆ.
 
ಆಂಧ್ರದ ಅನಂತಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಬಡವರು, ಕೆಲಸಗಾರರು,ರೈತರು, ಆರ್ಥಿಕ ತಜ್ಞರು, ವಿಶ್ವ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್  ಈ ಯೋಜನೆಯ ಉಪಯೋಗವನ್ನು ಅರ್ಥ ಮಾಡಿಕೊಂಡಿದ್ದಾರೆ. ಕೇಂದ್ರ ವಿತ್ತ ಸಚಿವರಾದ ಅರುಣ್ ಜೇಟ್ಲಿಯವರು ಸಹ ವೈಯಕ್ತಿಕವಾಗಿ ಈ ಯೋಜನೆಯನ್ನು ಹೊಗಳಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಮಗಳ ಮದುವೆಗೆ ನನ್ನನ್ನು ಕರೆಯಲು ಬಂದಿದ್ದ ಜೇಟ್ಲಿಯವರು ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದರು. ಆದರೆ ಪ್ರಧಾನಿ ಮೋದಿಯವರು ಮಾತ್ರ ಇದನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. 
 
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ 10 ವರ್ಷಗಳ ಹಿಂದೆ ಈ ಯೋಜನೆಗೆ ಚಾಲನೆ ನೀಡಿದ್ದರು. 

ವೆಬ್ದುನಿಯಾವನ್ನು ಓದಿ