ಪಾಕ್‌ಗೆ ಎಫ್. 16, ಮಿಲಿಟರಿ ಮಾರಾಟದ ಒಂದು ಅಂಶ: ಅಮೆರಿಕ ಕಮಾಂಡರ್

ಗುರುವಾರ, 25 ಫೆಬ್ರವರಿ 2016 (19:55 IST)
ಪಾಕಿಸ್ತಾನಕ್ಕೆ ಪರಮಾಣು ಸಾಮರ್ಥ್ಯದ 8 ಎಫ್‌-16 ಜೆಟ್ ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಅಮೆರಿಕ ನಿರ್ಧಾರದಿಂದ ಭಾರತ -ಅಮೆರಿಕ ಸಂಬಂಧದ ಕೆಲವು ಅಂಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಮೆರಿಕದ ಉನ್ನತ ಮಿಲಿಟರಿ ಕಮಾಂಡರ್ ತಿಳಿಸಿದ್ದಾರೆ.
 
ಸಂಸತ್ತಿನ ವಿಚಾರಣೆ ಸಂದರ್ಭದಲ್ಲಿ ಬುಧವಾರ ಅಮೆರಿಕ ಪೆಸಿಫಿಕ್ ಕಮಾಂಡ್ ಕಮಾಂಡರ್ ಅಡ್ಮೈರಲ್ ಹ್ಯಾರಿ ಹ್ಯಾರಿಸ್ ಈ ವಿಷಯ ತಿಳಿಸಿದ್ದಾರೆ. ಹ್ಯಾರಿಸ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದು, ಸದನದ ಸಶಸ್ತ್ರ ಸೇವಾ ಸಮಿತಿಯ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.  ನಾನು ಭಾರತಕ್ಕೆ ಹೋದಾಗ ಈ ಕುರಿತು ಕೇಳುತ್ತಾರೆಂದು ತಮಗೆ ಗೊತ್ತಿದೆ. ಈ ಮಾರಾಟವು ಜಗತ್ತಿನಾದ್ಯಂತ  ಮಿಲಿಟರಿ ಮಾರಾಟದ ಒಂದು ಅಂಶವಾಗಿದ್ದು, ಭಾರತದ ಜತೆ ನಮ್ಮ ಬಾಂಧವ್ಯವನ್ನು ತುಂಬಾ ಮುಖ್ಯವೆಂದು ಪರಿಗಣಿಸಿದ್ದೇವೆ ಎಂದು ಭಾರತಕ್ಕೆ ಮನದಟ್ಟು ಮಾಡಲು ಆಶಿಸುವುದಾಗಿ ಹ್ಯಾರಿಸ್ ತಿಳಿಸಿದರು.
 
ಪಾಕಿಸ್ತಾನಕ್ಕೆ ಫೈಟರ್ ಜೆಟ್ ಮಾರಾಟ ಮಾಡುವ ಒಬಾಮಾ ಆಡಳಿತದ ನಿರ್ಧಾರದ ಬಗ್ಗೆ ಅಮೆರಿಕ ಪ್ರತಿನಿಧಿ ಸಭೆಗೆ ಆಯ್ಕೆಯಾದ ಹಿಂದು ಮಹಿಳಾ ಸಂಸದೆ ತುಳಸಿ ಗಬಾರ್ಡ್ ತೀವ್ರ ಕಳವಳ ವ್ಯಕ್ತಪಡಿಸಿದ್ದರು. 
 
ಪಾಕಿಸ್ತಾನವು ಸುದೀರ್ಘ ಕಾಲದಿಂದ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡಿದ್ದು ಭಾರತದಲ್ಲಿ ಮತ್ತು ಆಫ್ಘಾನಿಸ್ತಾನದಲ್ಲಿ ಅಸ್ಥಿರ ದಾಳಿಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದ್ದರು.
 

ವೆಬ್ದುನಿಯಾವನ್ನು ಓದಿ