ಫೇಸ್‍ಬುಕ್‍ ಪವಾಡ: 15 ವರ್ಷದ ಬಳಿಕ ಒಂದಾದ್ರು ತಾಯಿ-ಮಗ

ಸೋಮವಾರ, 6 ಜುಲೈ 2015 (13:04 IST)
ಕುಂತಲ್ಲೂ, ನಿಂತಲ್ಲೂ, ನಿದ್ದೆಯ ಗುಂಗಲ್ಲೂ ಸಾಮಾಜಿಕ ಜಾಲತಾಣಗಳ ಗುಂಗಲ್ಲೇ ಕಳೆಯುವ ಯುವಜನತೆ ಬದುಕನ್ನು ಈ ಮೂಲಕ ಹಾಳುಗೆಡವಿ ಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಅತಿಯಾಗಿ ಕೇಳಿ ಬರುತ್ತಿರುತ್ತವೆ. ಫೇಸ್‍ಬುಕ್, ವಾಟ್ಸ್‌ಅಪ್ ಕೇವಲ ಸಮಯ ವ್ಯರ್ಥ ಮಾಡುವುದಕ್ಕಷ್ಟೇ. ಅವುಗಳಿಂದ ಮತ್ಯಾವ ಪ್ರಯೋಜನವಿಲ್ಲವೆಂದು ವಾದಿಸಲಾಗುತ್ತಿದೆ. ಆದರೆ ಈ ಟೈಮ್ ಪಾಸ್ ಫೇಸ್‌ಬುಕ್ 15 ವರ್ಷಗಳಿಂದ ದೂರವಿದ್ದ ತಾಯಿ ಮಗನನ್ನು ಮತ್ತೆ ಒಂದುಗೂಡಿಸಿದೆ, ಎಂದರೆ ನಂಬುತ್ತೀರಾ? 
 

 
ಇದು ನಡೆದಿರುವುದು ದೂರದ ಅಮೇರಿಕಾದಲ್ಲಿ. ಜೋನಾಥನ್ ಎಂಬ ಯುವಕ 3 ವರ್ಷದಲ್ಲಿದ್ದಾಗ ತಾಯಿಯಿಂದ ದೂರವಾಗಿದ್ದ. ಆತನ ತಂದೆಯೇ ಮಗನನ್ನು ಕಿಡ್ನಾಪ್ ಮಾಡಿ ಮೆಕ್ಸಿಕೋಗೆ ಪಲಾಯನ ಮಾಡಿದ್ದ. ಇದಾಗಿ ಈಗ 15 ವರ್ಷಗಳು ಕಳೆದಿವೆ. 
 
ತಾಯಿ ಹೋಪ್ ಹೋಲ್ಲಾಂಡ್‌ಗೆ ಗುಂಗುರು ಕೂಡಲಿನ ಮೂರು ವರ್ಷದ ತನ್ನ ಮಗುವಿನ ಮುಖ ಕಾಡುತ್ತಲೇ ಇರುತ್ತಿತ್ತು. ಎಷ್ಟೆಂದರೂ ಆಕೆ ಹೆತ್ತ ತಾಯಿಯಲ್ಲವೇ? ತನ್ನ ಮಗನನ್ನು ಹುಡುಕಿ ಹುಡುಕಿ ಸುಸ್ತಾದ ಆಕೆ ತನಗೆ ಆತ ಸಿಕ್ಕೇ ಸಿಗುತ್ತಾನೆ ಎಂಬ ಆಶಾವಾದವನ್ನು ಮಾತ್ರ ಬಿಟ್ಟಿರಲಿಲ್ಲ. 
 
ಈಗ ಆಕೆಯ ಕನಸು ನನಸಾಗಿದೆ. 18 ರ ಹರೆಯದ ಕಂದನನ್ನು, 15 ವರ್ಷಗಳ ಬಳಿಕ ನೋಡಿ, ತೋಳಲ್ಲಿ ತಬ್ಬಿಕೊಂಡು, ಮಡಲಲ್ಲಿಟ್ಟುಕೊಂಡು ಆನಂದಭಾಷ್ಪವನ್ನು ಸುರಿಸಿದ್ದಾಳೆ ಆಕೆ. ಇದೆಲ್ಲವನ್ನು ಸಾಧ್ಯವಾಗಿಸಿದ್ದು ಕೇವಲ ಫೇಸ್‌ಬುಕ್. 
 
ಈಗ 18 ವರ್ಷದವನಾಗಿರುವ ಜೋನಾಥನ್‍ಗೆ ಪದೇ ಪದೇ ತಾಯಿ ಮತ್ತು ಸಹೋದರನ ನೆನಪಾಗುತಿತ್ತು. ಕಳೆದ ವರ್ಷ ಫೇಸ್‍ಬುಕ್‍ನಲ್ಲಿ ಸಹೋದರನ ಜೊತೆ ಸ್ನಾನ ಮಾಡುತ್ತಿರುವ ಒಂದು ಫೋಟೋವನ್ನು ಆತ  ಅಪ್‍ಲೋಡ್ ಮಾಡಿದ್ದ. ಅದನ್ನು ನೋಡಿಯಾದರೂ ತಾಯಿ ತನ್ನನ್ನು ಗುರುತು ಹಿಡಿಯುತ್ತಾಳೆ ಎಂಬುದು ಆತನ ಆಶೆಯಾಗಿತ್ತು.  ಈ ಫೋಟೋ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು ಕೆಲ ದಿನಗಳ ಹಿಂದೆ ಈ ಫೋಟೋವನ್ನು ಜೋನಾಥನ್ ತಾಯಿ ನೋಡಿದ್ದಾಳೆ. ಫೋಟೋ ನೋಡಿದಾಗ ಈತನೇ ನನ್ನ ಮಗ ಎಂಬುದನ್ನು ಗುರುತು ಹಿಡಿದಿದ್ದಾಳೆ. ಜೋನಾಥನ್ ಗುಂಗುರು ಕೂದಲು ಆಕೆಗೆ ತನ್ನ ಮಗನೇ ಆತ ಎಂದು ಸಾರಿ ಹೇಳಿದೆ. 
 
ಕೂಡಲೇ ಆಕೆ ಜೋನಾಥನ್ ಫೇಸ್‍ಬುಕ್‍ನಲ್ಲಿ ಸಂಪರ್ಕಿಸಿದ ಆಕೆ ಆತನ ಫೋನ್ ನಂಬರ್ ತೆಗೆದುಕೊಂಡು ಕರೆ ಮಾಡಿ ಮಾತನಾಡುತ್ತಾಳೆ. ಕುಣಿಯುತ್ತಾಳೆ. ಕಣ್ಣೀರಾಗುತ್ತಾಳೆ. ಅವರಿಬ್ಬರು ದೂರವಾಣಿಯಲ್ಲಿ ಮಾತನಾಡಿದ್ದು ಬರೊಬ್ಬರಿ 80 ನಿಮಿಷಗಳ ಕಾಲ.
 
ನಂತರ ಕೆಲವೇ ದಿನಗಳಲ್ಲಿ ಮಗ ಮತ್ತು ತಾಯಿ ಒಬ್ಬರನೊಬ್ಬರನ್ನು ನೋಡಿ ಕಣ್ಣೀರಾದರು. ಸ್ವರ್ಗವನ್ನೇ ಗೆದ್ದಷ್ಟು ಸಂತೋಷ ಪಟ್ಟರು. 
 
ಮಾಧ್ಯಮ ಒಂದರ ಜತೆ ಮಾತನಾಡಿರುವ ಆಕೆ ಗದ್ಗದಿತ ದನಿಯಲ್ಲಿ ಹೇಳಿದ್ದು ಇಷ್ಟೇ, "ಇದು ಬಹಳ ನೋವಿನ ದೀರ್ಘ ಪ್ರಯಾಣ". ಕಳೆದ ಕೆಲ ದಿನಗಳ ಹಿಂದೆ ನಾನು ವೆಬಿನಾರ್‌ಗಾಗಿ ಫೇಸ್‌ಬುಕ್ ಸೈನ್ ಇನ್ ಮಾಡಿದಾಗ ಕಂಡ ಭಾವಚಿತ್ರವೊಂದು ಹೃದಯದ ಬಡಿತ ನಿಯಂತ್ರಣ ತಪ್ಪುವಂತೆ ಮಾಡಿತು. ಮೈ ಎಲ್ಲಾ ಬೆವರಿತು. ದೇಹ ನಡುಗತೊಡಗಿತು. ಆ ಚಿತ್ರದಲ್ಲಿ ಪುಟ್ಟ ಮಕ್ಕಳಿಬ್ಬರು ಸ್ನಾನ ಮಾಡುತ್ತಿದ್ದರು. ಅವರಿಬ್ಬರು ತನ್ನ ಮಕ್ಕಳು ಎಂದು ಗುರುತಿಸಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಆ ಭಾವಚಿತ್ರವನ್ನು ತೆಗೆದಿದ್ದು ಸಹ ನಾನೇ ಆಗಿದ್ದೆ. ಅದು ಬರೊಬ್ಬರಿ 15 ವರ್ಷಗಳ ಹಿಂದೆ" .
 
ಮಾಧ್ಯಮಗಳಲ್ಲಿ ಪ್ರಕಟವಾದಂತೆ ಜೋನಾಥನ್ ಈಗ ಹೈಸ್ಕೂಲ್ ಓದುತ್ತಿದ್ದು, ಎರಡು ತಿಂಗಳ ರಜೆಯನ್ನು ಅಮ್ಮನ ಜತೆ ಕಳೆಯಲು ನಿರ್ಧರಿಸಿದ್ದಾನೆ. ಅಲ್ಲದೇ ಹೈಸ್ಕೂಲ್ ಶಿಕ್ಷಣ ಮುಗಿದ ಬಳಿಕ ಆತ ಕ್ಯಾಲಿಫೋರ್ನಿಯಾಗೆ ಮರಳಿ ಬರುತ್ತೇನೆ ಎಂದು ತಾಯಿಗೆ ಆಶ್ವಾಸನೆ ನೀಡಿದ್ದಾನೆ. 

ವೆಬ್ದುನಿಯಾವನ್ನು ಓದಿ