8 ನವಜಾತ ಶಿಶುಗಳನ್ನು ಕೊಂದ ಫ್ರೆಂಚ್ ತಾಯಿಗೆ 9 ವರ್ಷ ಜೈಲು

ಶನಿವಾರ, 4 ಜುಲೈ 2015 (16:58 IST)
ಸುಮಾರು 10 ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ  ತನ್ನ 8 ಮಂದಿ ನವಜಾತ ಶಿಶುಗಳನ್ನು ಹತ್ಯೆ ಮಾಡಿದ ಫ್ರೆಂಚ್ ಮಹಿಳೆಗೆ  ವಿಚಾರಣೆ ಬಳಿಕ 9 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಡುವಾಯ್‌ನ ಉತ್ತರ ನಗರದಲ್ಲಿ ಕೆಲವು ಗಂಟೆಗಳ ಚರ್ಚೆ ನಡೆಸಿದ ಬಳಿಕ ನ್ಯಾಯಾಧೀಶರು ಡಾಮಿನಿಕ್ ಕಾಟ್ರೆಜ್ ಎಂಬ 51 ವರ್ಷ ವಯಸ್ಸಿನ ತಾಯಿಗೆ 9 ವರ್ಷ ಜೈಲು ಶಿಕ್ಷೆ ವಿಧಿಸಿದರು. 

ಪ್ರಾಸಿಕ್ಯೂಷನ್ ಕಾಟ್ರೆಜ್‌ಗೆ‌‍ 18 ವರ್ಷ ಜೈಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿತ್ತು. ಆದರೆ ಕಾಟ್ರೆಜ್ ಪರ ವಕೀಲರು ಕಾಟ್ರೇಜ್ ಅಸ್ವಸ್ಥ ಮಾನಸಿಕ ಸ್ಥಿತಿ ಹಿನ್ನೆಲೆಯಲ್ಲಿ ದೋಷಮುಕ್ತಿ ಗೊಳಿಸಬೇಕೆಂದು ಕೋರಿದ್ದರು. 
 
 ಉತ್ತರ ಫ್ರಾನ್ಸ್‌ನ ಗ್ರಾಮದಲ್ಲಿರುವ ಕಾಟ್ರೆಜ್ ಮನೆಯ ಹೊಸ ಮಾಲೀಕರು ಮಗುವೊಂದರ ದೇಹವನ್ನು ಪತ್ತೆಹಚ್ಚಿ ಪೊಲೀಸರನ್ನು ಕರೆಸಿದಾಗ ತೋಟದಲ್ಲಿ ಎರಡನೇ ಮಗುವನ್ನು ಹೂತಿರುವುದು ಪತ್ತೆಯಾಯಿತು. ನಂತರ ಕಾಟ್ರೆಜ್ ಗ್ಯಾರೇಜ್‌ನಲ್ಲಿ ಇನ್ನೂ ಕೆಲವು ಶವಗಳನ್ನು ಹೂತಿರುವುದಾಗಿ ತಿಳಿಸಿದ್ದಳು. ಆದರೆ ಎಷ್ಟು ಶವಗಳನ್ನು ಹೂತಿದ್ದಳೆಂದು ಅವಳಿಗೇ ಗೊತ್ತಿರಲಿಲ್ಲ. 
 
ಸುಮಾರು ನಾಲ್ಕು ವರ್ಷಗಳವರೆಗೆ ಪೊಲೀಸ್ ತನಿಖೆದಾರರಿಗೆ , ಮಾನಸಿಕ ತಜ್ಞರಿಗೆ, ವಕೀಲರಿಗೆ ಸುಳ್ಳು ಕಥೆಯೊಂದನ್ನು ಕಟ್ಟಿ, ತಾನು ಮಗುವಾಗಿದ್ದಾಗಲೇ ತನ್ನ ತಂದೆ ಅತ್ಯಾಚಾರ ಮಾಡಿದ್ದು, ಮದುವೆಯಾದ ಮೇಲೂ ತಂದೆ ಅನೈತಿಕ ಸಂಬಂಧ ಹೊಂದಿದ್ದರೆಂದು ಹೇಳಿದ್ದಳು. 
ತಂದೆಯ ಜೊತೆ ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳೆಂಬ ಭಯದಿಂದ ಮಕ್ಕಳನ್ನು ಕೊಂದಿದ್ದಾಗಿ ಮೊದಲಿಗೆ ಅವಳು ಹೇಳಿದ್ದಳು. ಆದರೆ ಸೋಮವಾರ ತನ್ನ ತಂದೆ ಅತ್ಯಾಚಾರ ಮಾಡಿಲ್ಲವೆಂದು ಒಪ್ಪಿಕೊಂಡಳು. 
 
 ಕಾಟ್ರೆಜ್ ಸ್ಥೂಲಕಾಯತೆಯಿಂದ ಅವಳ ಗರ್ಭದಾರಣೆಯು ಮುಚ್ಚಿಹೋಗುತ್ತಿತ್ತು.  ಪತಿ, ನೆರೆಯವರಿಗೆ ಮತ್ತು ವೈದ್ಯರಿಗೆ ಕೂಡ ಗರ್ಭಿಣಿಯಾಗಿದ್ದು ತಿಳಿದಿರಲಿಲ್ಲವೆಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ