ಎಲ್ಲರಿಂದಲೂ ನಾನು ಗುರುತಿಸಲ್ಪಡುತ್ತೇನೆ: ಜರ್ಮನ್ ವಿಂಗ್ಸ್ ವಿಮಾನ ಅಪಘಾತಕ್ಕೆ ಕಾರಣನಾದ ಸಹ ಪೈಲಟ್

ಶನಿವಾರ, 28 ಮಾರ್ಚ್ 2015 (17:48 IST)
ಜರ್ಮನ್‌ವಿಂಗ್ಸ್ ವಿಮಾನವನ್ನು ಉದ್ದೇಶಪೂರ್ವಕವಾಗಿ ಆಲ್ಪ್ಸ್ ಪರ್ವತಕ್ಕೆ ಡಿಕ್ಕಿ ಹೊಡೆಸಿ 149 ಪ್ರಯಾಣಿಕರ ಸಾವಿಗೆ ಕಾರಣನಾದ ಸಹ ಪೈಲಟ್ ಆ್ಯಂಡ್ರಿಯಸ್ ಲುಬಿಸ್ ಒಂದು ದಿನ ಎಲ್ಲರೂ ನನ್ನ ಬಗ್ಗೆ ತಿಳಿಯುವಂತಾಗುತ್ತದೆ ಎಂದು ಹಿಂದೊಮ್ಮೆ ತನ್ನ ಮಾಜಿ ಪ್ರೇಯಸಿಯ ಬಳಿ ಹೇಳಿದ್ದ ಎಂದು ಜರ್ಮನ್ ಸುದ್ದಿಪತ್ರಿಕೆಯೊಂದು ಹೇಳಿದೆ.

ಸಂದರ್ಶನವೊಂದರಲ್ಲಿ ಉತ್ತರಿಸುತ್ತಿದ್ದ 26 ವರ್ಷದ ವೈಮಾನಿಕ ಸಂಸ್ಥೆಯ ಉದ್ಯೋಗಿ ಮಾರಿಯಾ, ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತನ್ನ ಬಳಿ ಮಾಜಿ ಗೆಳೆಯ ಆ್ಯಂಡ್ರಿಯಸ್ ಲುಬಿಸ್ ಹೇಳಿದ್ದ ಮಾತುಗಳನ್ನು ಮೆಲುಕು ಹಾಕಿದ್ದಾಳೆ. ಒಂದು ದಿನ ನಾನು ಮಾಡುವ ಕೆಲಸವೊಂದು ಇಡೀ ವ್ಯವಸ್ಥೆಯನ್ನು ಬದಲಿಸುತ್ತದೆ. ಅಂದು ಪ್ರತಿಯೊಬ್ಬರೂ ನನ್ನ ಹೆಸರನ್ನು ತಿಳಿಯುತ್ತಾರೆ ಮತ್ತು ಪದೇ ಪದೇ ನನ್ನನ್ನು ನೆನಪಿಸುತ್ತಿರುತ್ತಾರೆ ಎಂದು ಆತ ಹೇಳಿದ್ದನಂತೆ.
 
ಬ್ಲಾಕ್ ಬಾಕ್ಸ್‌ನಲ್ಲಿ  ರೆಕಾರ್ಡ್ ಆಗಿರುವ ಧ್ವನಿಯ ಪ್ರಕಾರ, ಮುಖ್ಯ ಪೈಲಟ್ ಕಾಕ್‌ಪಿಟ್‌ನಿಂದ ಹೊರಹೋಗುವುದನ್ನೇ ಕಾಯುತ್ತಿದ್ದ ಲುಬಿಸ್, ಕೂಡಲೇ ಬಾಗಿಲ ಚಿಲಕ ಹಾಕಿಕೊಂಡು ವಿಮಾನವನ್ನು ಉದ್ದೇಶಪೂರ್ವಕವಾಗಿ ಫ್ರೆಂಚ್ ಆಲ್ಪ್ಸ್ ಪರ್ವತ ಶ್ರೇಣಿಗೆ ಅಪ್ಪಳಿಸಿದ್ದ.  ಇದು ಆತ್ಮಹತ್ಯೆ ಮತ್ತು ಸಾಮೂಹಿಕ ಹತ್ಯೆ ಪ್ರಕರಣ ಎಂದು ಫ್ರೆಂಚ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. 
 
ಘಟನೆಯ ಕುರಿತು ಪ್ರತಿಕ್ರಿಯಿದ್ದ ಫ್ರೆಂಚ್ ಪ್ರಧಾನಿ ಮ್ಯಾನುಯೆಲ್ ವಾಲ್ಸ್, "ಎಲ್ಲಾ  ಸಂಖೇತಗಳು ಇದೊಂದು ವಿವರಿಸಲಾಗದ ಕುಕೃತ್ಯವೆಂದು ತಿಳಿಸುತ್ತವೆ. ಇದೊಂದು ಕ್ರಿಮಿನಲ್, ಕ್ರೇಜಿ, ಆತ್ಮಹತ್ಯೆ",  ಎಂದಿದ್ದಾರೆ. 
 
ಲುಬಿಸ್ ಗಂಭೀರವಾದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಅದಕ್ಕಾಗಿ ಆತ  ಔಷಧೋಪಚಾರ ತೆಗೆದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ ಆತನಿಗಿದ್ದ ಕಾಯಿಲೆ ಯಾವುದೆಂದು ಖಚಿತವಾಗಿ ತಿಳಿದಿಲ್ಲ.
 
ಲುಬಿಸ್ ಉದ್ದೇಶಪೂರ್ವಕವಾಗಿ ವಿಮಾನವನ್ನು ಅಪ್ಪಳಿಸಿದ್ದಾನೆಂದರೆ ಅದು ಆತನ ಖಿನ್ನತೆಯ ಪರಿಣಾಮವೇ.ಲುಫ್ಥಾನ್ಸದಲ್ಲಿ  ಕ್ಯಾಪ್ಟನ್ ಆಗಿ  ಕೆಲಸಗಿಟ್ಟಿಸುವುದು ಆತನ ದೊಡ್ಡ ಕನಸಾಗಿತ್ತು, ಆದರೆ ತನ್ನ  ಮಾನಸಿಕ ಕಾಯಿಲೆಯಿಂದ ಅದು ಅಸಾಧ್ಯ ಎಂಬ ನೋವು, ಹತಾಶೆ ಆತನನ್ನು ಈ ರೀತಿಯ ಕೆಟ್ಟ ನಿರ್ಧಾರಕ್ಕೆ ಪ್ರೇರೇಸಿರಬಹುದು ಎಂದು ಆತನ ಮಾಜಿ ಗೆಳತಿ ಅಭಿಪ್ರಾಯ ಪಟ್ಟಿದ್ದಾಳೆ. 

ವೆಬ್ದುನಿಯಾವನ್ನು ಓದಿ