ಬೀದಿಗೆಸೆದಿದ್ದ ಮಗುವನ್ನು ರಕ್ಷಿಸಿದ ಬೆಕ್ಕು!

ಮಂಗಳವಾರ, 3 ಫೆಬ್ರವರಿ 2015 (12:47 IST)
ಈ ಸುದ್ದಿಯ ಹಿರೋ ಒಂದು ಬೆಕ್ಕು. ಪಾಲಕರು ಮಗು ಬೇಡವೆಂದು  ರಸ್ತೆಗೆಸೆದರೆ ಬೆಕ್ಕು ಅದನ್ನು ತಾಯಿಯಂತೆ ಮಡಿಲಲ್ಲಿಟ್ಟುಕೊಂಡು ಕಾಪಾಡಿದೆ. ಬೀದಿ ಬದಿಯಲ್ಲಿ ಎಸೆಯಲಾಗಿದ್ದ ಜೀವಂತ ಮಗುವೊಂದನ್ನು ಬೆಕ್ಕೊಂದು ರಕ್ಷಿಸಿದ ಹೃದಯಸ್ಪರ್ಶಿ ಘಟನೆಯಿದು. ರಶ್ಯಾದ ಅಬ್ನಿಸ್ಕ್ ಎಂಬ ಪಟ್ಟಣದಲ್ಲಿ ಇದು ನಡೆದಿದೆ.
ದಾರಿ ತಪ್ಪಿ ಬಂದಿರುವ ಬೆಕ್ಕಿಗೆ ಅಲ್ಲೇ ಹತ್ತಿರದಲ್ಲಿನ ಅಪಾರ್ಟಮೆಂಟ್ ನಿವಾಸಿಗಳು ಬೀದಿಯಲ್ಲಿ ರಟ್ಟಿನ ಪೆಟ್ಟಿಗೆಯೊಂದನ್ನಿಟ್ಟು ಊಟವನ್ನು ಹಾಕುತ್ತಿದ್ದರು. ಪ್ರತಿದಿನದಂತೆ ಆ ದಿನ ಕೂಡ ರಟ್ಟಿನ ಪೆಟ್ಟಿಗೆಯ ಹತ್ತಿರ ಹೋಗಿ ಆಹಾರಕ್ಕಾಗಿ ನೋಡಿದ ಬೆಕ್ಕು ಅದರಲ್ಲಿ ಪುಟ್ಟ ಮಗುವೊಂದು ಚಳಿಯಿಂದ ನಡುಗುತ್ತಿರುವುದನ್ನು ನೋಡಿದೆ. ಮುಗ್ಧ ಪ್ರಾಣಿಗೆ ಆ ಮಗುವಿನ ದುರವಸ್ಥೆ ಮರುಕ ತೋರಿಸಿದೆ. ಹೀಗಾಗಿ ಬೆಳಕಾಗುವವರೆಗೆ ಅದಕ್ಕೆ ಒತ್ತಿಕೊಂಡು ಮಲಗಿದ ಪ್ರಾಣಿ, ಕಂದ ಬೆಚ್ಚಗಿರುವಂತೆ ನೋಡಿಕೊಂಡಿದೆ ಎಂದು ರಶ್ಯನ್ ಪತ್ರಿಕೆಯೊಂದು ವರದಿ ಮಾಡಿದೆ. 
 
ಮಗುವನ್ನು ಬೆಚ್ಚಗಿಟ್ಟುಕೊಂಡು ಬೆಳಕಾಗುವವರೆಗೆ ಕುಳಿತ ಬೆಕ್ಕು  ಸಹಾಯಕ್ಕಾಗಿ ಮ್ಯಾಂವ್ ಮ್ಯಾಂವ್ ಎಂದು ಕೂಗತೊಡಗಿತು.  ಬೆಕ್ಕು ಕೂಗುತ್ತಿರುವದನ್ನು ನೋಡಿದ ದಾರಿಹೋಕ ಮಹಿಳೆಯೊಬ್ಬರು ಹತ್ತಿರ ಹೋಗಿ ನೋಡಿದಾಗ ಅದಕ್ಕೆ ಅಲ್ಲಿ ಮಗುವಿರುವುದು ತಿಳಿದು ಬಂದಿದೆ.
 
ಮಹಿಳೆ ಈ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಅಂಬುಲೆನ್ಸಿನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಬೆಕ್ಕು ಸಹ ವಾಹನದೊಳಕ್ಕೆ ಜಿಗಿಯಲು ಪ್ರಯತ್ನಿಸಿದೆ. ಆದರೆ ಸಿಬ್ಬಂದಿ ಅದನ್ನು ತಡೆದಾಗ ಕರುಣಾಜನಕವಾಗಿ ಮ್ಯಾಂವ್ ಎಂದಿದೆ ಮತ್ತು  ಬಹು ದೂರದವರೆಗೆ ಅಂಬುಲೆನ್ಸ್‌ನ್ನು ಹಿಂಬಾಲಿಸಿದೆ ಎಂದು ವರದಿ ತಿಳಿಸಿದೆ. 
 
ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದು, ಒಂದು ವೇಳೆ ಬೆಕ್ಕು ಮಗುವನ್ನು ಬೆಚ್ಚಗೆ ಇಟ್ಟುಕೊಳ್ಳದಿದ್ದರೆ ಕೊರೆಯುವ ಚಳಿಗೆ ಮೂರು ತಿಂಗಳ ಈ ಮಗು ಸಾವನ್ನಪ್ಪುತ್ತಿತ್ತು ಎಂದು ಹೇಳಿದ್ದಾರೆ. 
 
ಬೆಕ್ಕು ಯಾರಿಗೂ ಸಹ ಸೇರಿದ್ದಲ್ಲ. ಅದರ ಬಗ್ಗೆ ಮರುಕ ಹೊಂದಿರುವ ಹತ್ತಿರದ ಅಪಾರ್ಟಮೆಂಟ್ ಜನರು ಬೀದಿಯಲ್ಲಿ ಅದಕ್ಕಾಗಿ ಒಂದು ಪೆಟ್ಟಿಗೆಯನ್ನಿಟ್ಟು ಆಹಾರವನ್ನು ಹಾಕುತ್ತಿದ್ದರು. ಅದೇ ಪೆಟ್ಟಿಗೆಯಲ್ಲಿ ಅಪರಿಚಿತರು ಮೂರು ತಿಂಗಳ ಮಗುವೊಂದನ್ನು ಬಿಟ್ಟು ಹೋಗಿದ್ದಾರೆ.  
 
ಮಗುವಿನ ಪಾಲಕರನ್ನು ಪತ್ತೆ ಹಚ್ಚಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ