ಹಿಂದೂಜಾ ಗ್ರೂಪ್‌ನಿಂದ ಪಾರಂಪರಿಕ ಲಂಡನ್ ವಾರ್ ಆಫೀಸ್ ಕಟ್ಟಡ ಖರೀದಿ

ಬುಧವಾರ, 2 ಮಾರ್ಚ್ 2016 (17:33 IST)
ಕೇಂದ್ರ ಲಂಡನ್‌ನಲ್ಲಿರುವ  ಐತಿಹಾಸಿಕ 1100 ಕೋಣೆಗಳ ಹಳೆಯ ವಾರ್ ಆಫೀಸ್ ಕಟ್ಟಡವನ್ನು ಹಿಂದೂಜಾ ಸಮೂಹ ಸಂಸ್ಥೆ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಈ ಕಚೇರಿಯಲ್ಲಿ ಹಿಂದೊಮ್ಮೆ ಬ್ರಿಟನ್ ಯುದ್ಧ ಕಾಲದ ಪ್ರಧಾನಮಂತ್ರಿ ವಿನ್ಸ್‌ಟನ್ ಚರ್ಚಿಲ್ ವಾಸವಿದ್ದರು. ಇದನ್ನು ನವೀಕರಿಸಿ ಪಂಚತಾರಾ ಹೊಟೆಲ್ ಮತ್ತು ಅಪಾರ್ಟ್‌‍ಮೆಂಟ್‌ಗಳಾಗಿ ಮರುಅಭಿವೃದ್ಧಿಗೊಳಿಸಲಾಗುತ್ತದೆ. 
 
ಪಾರಂಪರಿಕ ಕಟ್ಟಡ ವೈಟ್‌ಹಾಲ್ ಬ್ರಿಟಿಷ್ ಸಂಸತ್ತು ಮತ್ತು ಪ್ರಧಾನಮಂತ್ರಿ ನಿವಾಸಕ್ಕೆ ಸಮೀಪದಲ್ಲಿದ್ದು, ಏಳು ಮಹಡಿಗಳಲ್ಲಿ ಒಟ್ಟು 580,000 ಚದರಡಿ ವಿಸ್ತೀರ್ಣ ಹೊಂದಿದ್ದು, ಮೂರು ಕಿಮೀ ಗಿಂತ ಹೆಚ್ಚು ಕಾರಿಡಾರ್ ಹೊಂದಿದೆ. 
 
ನಿನ್ನೆ ನಡೆದ ಸಮಾರಂಭದಲ್ಲಿ ಕಟ್ಟಡದ ಕೀಲಿಕೈಯನ್ನು ಔಪಚಾರಿಕವಾಗಿ ಹಿಂದೂಜಾ ಗ್ರೂಪ್‌ಗೆ ಹಸ್ತಾಂತರಿಸಲಾಯಿತು.  ಬಹಿರಂಗ ಮಾಡದ ಮೊತ್ತಕ್ಕೆ ಈ ಕಟ್ಟಡವನ್ನು ಹಿಂದೂಜಾ ಖರೀದಿಸಿದ್ದು, ಪಂಚತಾರಾ ಹೊಟೆಲ್ ಅಲ್ಲದೇ ಖಾಸಗಿ ಸಮಾರಂಭದ ಕೋಣೆಗಳು, ಸ್ಪಾ ಮತ್ತು ಫಿಟ್ನೆಸ್ ಸೌಲಭ್ಯವನ್ನು ಅದು ಹೊಂದಿರುತ್ತದೆ.
ಬ್ರಿಟನ್‌ನ ಅತೀ ಶ್ರೀಮಂತ ವ್ಯಕ್ತಿಗಳಾದ ಹಿಂದೂಜಾಗಳು ಸ್ಪೇನ್ ಕೈಗಾರಿಕಾ ಕಂಪನಿ ಓಬ್ರಾಸ್ಕನ್ ಸಹಯೋಗದೊಂದಿಗೆ ಈ ಕಟ್ಟಡವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ