ಪಾಕ್ ಉಗ್ರರ ದಾಳಿ: ಸಾವಿನ ಸನಿಹದಿಂದ ಜೀವವನ್ನೆಳೆದುಕೊಂಡು ಬಂದ ಬಾಲಕನ ಕಥನ

ಬುಧವಾರ, 17 ಡಿಸೆಂಬರ್ 2014 (15:20 IST)
ಪಾಕಿಸ್ತಾನದ ಪೇಷಾವರದಲ್ಲಿ ಮಂಗಳವಾರ ನಡೆದ ತಾಲಿಬಾನ್ ಉಗ್ರರ ಮಾರಣಹೋಮದಲ್ಲಿ ಬಚಾವಾಗಿ ಬಂದ ಪ್ರತಿಯೊಬ್ಬ ಮಕ್ಕಳು ಆಘಾತದಲ್ಲಿದ್ದಾರೆ. ಉಗ್ರರಿಂದ ಎರಡು ಕಾಲಿಗೆ ಗುಂಡೇಟು ತಿಂದ ಬಾಲಕನೊಬ್ಬ ಸತ್ತಂತೆ ನಟಿಸಿ ಜೀವ ಉಳಿಸಿಕೊಂಡು ಬಂದ ಕರಾಳ ನೆನಪನ್ನು ಬಿಚ್ಚಿಡುತ್ತಾನೆ.
ಪೇಷಾವರದ ವಾಯುವ್ಯ ಭಾಗದಲ್ಲಿರುವ ಸೇನಾ ಶಾಲೆಯಲ್ಲಿ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು, 130 ಮಕ್ಕಳು ಸೇರಿದಂತೆ ಕನಿಷ್ಠ 150 ಜನರ ಸಾವಿಗೆ ಕಾರಣರಾಗಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಭೀಕರ ಉಗ್ರ ಕೃತ್ಯಗಳಲ್ಲಿ ಇದು ಒಂದಾಗಿದೆ. 
 
ನಾನು ಮತ್ತು ನನ್ನ ಸಹಪಾಠಿಗಳು ವೃತ್ತಿ ಮಾರ್ಗದರ್ಶನ ತರಗತಿಗಳಲ್ಲಿ ವ್ಯಸ್ತರಾಗಿದ್ದ ಸಂದರ್ಭದಲ್ಲಿ ಅರೆಸೈನಿಕ ಸಮವಸ್ತ್ರ ಧರಿಸಿದ್ದ ನಾಲ್ಕು ಉಗ್ರಗಾಮಿಗಳು ಏಕಾಯೇಕಿ ಒಳ ಬಂದರು ಎನ್ನುತ್ತಾನೆ  ನಗರದ ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ 16 ವರ್ಷದ ಶಾರುಖ್ ಖಾನ್. 
 
ತನ್ನ ಕರಾಳ ಅನುಭವ ಕಥನವನ್ನು ಖಾನ್ ಹೀಗೆ ಮುಂದುವರೆಸುತ್ತಾನೆ.  ಕೆಳಗಿಳಿಯಿರಿ , ಡೆಸ್ಕ್ ಹಿಂದೆ ಅವಿತುಕೊಳ್ಳಿ ಎಂದು ಯಾರೋ ಒಬ್ಬರು ಕಿರುಚಿದರು . ಆಗ  ಬಂದೂಕುದಾರಿಗಳಲ್ಲಿ ಒಬ್ಬ ಅಲ್ಲಾ ಹೋ ಅಕ್ಬರ್ ಎನ್ನುತ್ತ  ಗುಂಡಿನ ದಾಳಿ ಪ್ರಾರಂಭಿಸಿದ. ಆತನ  ಸಹಚರನೊಬ್ಬ ಮೇಜುಗಳ ಕೆಳಗೆ  ಬಹಳಷ್ಟು ಮಕ್ಕಳು ಅವಿತಿದ್ದಾರೆ. ಅವರನ್ನು ಮುಗಿಸೆಂದ.
 
ಮೇಜಿನಡಿ ಅವಿತಿದ್ದ ನನ್ನ ಸಹಪಾಠಿಗಳು ಕಿರುಚುತ್ತ ನೆಲಕ್ಕುರುಳತೊಡಗಿದರು. ಅಷ್ಟರಲ್ಲಿ ನನ್ನೆಡೆ ಎರಡು ಕಪ್ಪು ಬೂಟುಗಳು ಬರುತ್ತಿರುವುದು ಕಾಣಿಸಿತು.  ಆತ ನನ್ನ ಎರಡು ಮೊಣಕಾಲಿಗೆ ಗುಂಡು ಹಾರಿಸಿದ. ಸಹಿಸಲಾಗದ ತೀವೃ ನೋವಿನ ನಡುವೆಯೂ ನಾನು ಸತ್ತ ನಾಟಕ ಆಡಲು ನಿರ್ಧರಿಸಿದೆ. ನೋವಿನಿಂದ ನರಳಾಡುವ ಶಬ್ಧ ಹೊರಗೆ ಬರಬಾರದಂದು ಕುತ್ತಿಗೆಗಿದ್ದ ಟೈ ತೆಗೆದು  ಬಾಯಿಯಲ್ಲಿ ತುರುಕಿದೆ. 
 
ದೊಡ್ಡ ಬೂಟುಗಳ ಆ ವ್ಯಕ್ತಿ ಯಾರಾದರೂ ಬದುಕಿದ್ದಾರೆಯೇ ಎಂದು ವಿದ್ಯಾರ್ಥಿಗಳನ್ನು ಹುಡುಕತೊಡಗಿದ. ನಾನು ಉಸಿರು ಬಿಗಿಹಿಡಿದುಕೊಂಡು  ಹಾಗೆಯೇ ಬಿದ್ದುಕೊಂಡಿದ್ದೆ. ಆತ ನನ್ನ ಮೇಲೆ ಮತ್ತೆ ಗುಂಡು ಹಾರಿಸುತ್ತಾನೆ ಎಂಬ ಆತಂಕ ನನ್ನಲ್ಲಿತ್ತು ಎನ್ನುತ್ತಾನೆ ಚತುರ ಬಾಲಕ.

ವೆಬ್ದುನಿಯಾವನ್ನು ಓದಿ