ಭಾರತದ ಕಾರ್ಯಾಚರಣೆಗೆ ಚೀನಾ ದಂಗು

ಶನಿವಾರ, 2 ಮೇ 2015 (09:50 IST)
ನೇಪಾಳದಲ್ಲಿ ಬಾರತೀಯ ರಕ್ಷಣಾ ಪಡೆ, ಸೈನಿಕರ ಚುರುಕಿನ ಕಾರ್ಯಾಚರಣೆ ವಿಶ್ವದಾದ್ಯಂತ ಪ್ರಶಂಸೆಗೆ ಒಳಗಾಗಿದ್ದು, ಭಾರತೀಯರಂತೆ ನೀವ್ಯಾಕೆ ಚಟುವಟಿಕೆಯಿಂದಿಲ್ಲ ಎಂದು ಚೀನಾದ ಮಾಧ್ಯಮಗಳು ತಮ್ಮ ದೇಶದ ರಕ್ಷಣಾ ಪಡೆ ಸಿಬ್ಬಂದಿಗಳಿಗೆ ಪ್ರಶ್ನಿಸಿವೆ.

ಭೂಕಂಪ ಪೀಡಿತ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ವಿು ಭಾರತೀಯರಂತೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿವೆ ಎಂಬುದು ಮಾಧ್ಯಮದವರ  ಅಸಮಾಧಾನಕ್ಕೆ ಕಾರಣವಾಗಿದೆ. 
ನೇಪಾಳದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಭೂಕಂಪದ ಪರಿಣಾಮ ಕಷ್ಟಕ್ಕೆ ಸಿಲುಕಿಕೊಂಡಿದ್ದ ಸಾವಿರ ಸಾವಿರ ಭಾರತೀಯರನ್ನು ರಕ್ಷಿಸಲಾಗಿದ್ದು ಸ್ವದೇಶಕ್ಕೆ ಹಿಂತಿರುಗಿ ಕರೆತರಲಾಗಿದೆ. ಅದರ ಎಲ್ಲ ಶ್ರೇಯಸ್ಸು ಸಲ್ಲಬೇಕಾದದ್ದು ಭಾರತೀಯ ರಕ್ಷಣಾ ಪಡೆಗೆ. ಆದರೆ ಚೀನಾದ ಸುಮಾರು 8 ಸಾವಿರ ನಾಗರಿಕರು ಇನ್ನೂ ನೇಪಾಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದು ಚೀನಾದ ಮಾಧ್ಯಮಗಳು ತಮ್ಮ ಸೈನಿಕರ ವಿರುದ್ಧ ಕಿಡಿಕಾರಲು ಕಾರಣವಾಗಿದೆ.
 
ಅಲ್ಲದೇ ಚೀನಾ ಸರಕಾರ ರಕ್ಷಣಾ ಕಾರ್ಯಾಚರಣೆಗೆ ವಿಮಾನವನ್ನು ಬಳಸಿಕೊಂಡಿಲ್ಲ. ಈ ಕೆಟ್ಟ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ ಚೀನಾದ ಕೆಲ ಖಾಸಗಿ ವಿಮಾನ ಕಂಪನಿಗಳು ಕಠ್ಮಂಡುವಿನ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಕಠಿಣ ಪರಿಸ್ಥಿತಿಯಲ್ಲೂ ದುರ್ವರ್ತನೆಯನ್ನು ತೋರಿವೆ. ಇದು ಸಹ ಚೀನಾ ಮಾಧ್ಯಮಗಳು ಆಕ್ರೋಶವನ್ನು ವ್ಯಕ್ತಪಡಿಸಲು ಕಾರಣವಾಗಿವೆ.
 
ನೇಪಾಳದ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮತ್ತೆ ಭೂಕಂಪವಾಗಬಹುದೆಂಬ ಭಯದಿಂದ ಬೀದಿಗಳಲ್ಲಿ ಟೆಂಟ್‌ಗಳನ್ನು ಹಾಕಿಕೊಂಡಿದ್ದ ಸಾವಿರಾರು ಜನ ಈಗ ಮನೆಗಳಿಗೆ ಮರಳುತ್ತಿದ್ದಾರೆ. ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ 6,200 ತಲುಪಿದೆ. 

ವೆಬ್ದುನಿಯಾವನ್ನು ಓದಿ