ಜಮ್ಮುಕಾಶ್ಮೀರದಲ್ಲಿ ಜನಮತಗಣನೆಯ ಪಾಕ್ ಕರೆಗೆ ಭಾರತದ ಪ್ರಬಲ ವಿರೋಧ

ಗುರುವಾರ, 3 ಸೆಪ್ಟಂಬರ್ 2015 (16:05 IST)
ವಿಶ್ವಸಂಸ್ಥೆ:  ಜಮ್ಮು ಕಾಶ್ಮೀರದಲ್ಲಿ ಜನಮತಗಣನೆ ನಡೆಸಬೇಕೆಂಬ ಪಾಕಿಸ್ತಾನದ ಕರೆಯನ್ನು ಭಾರತ ಪ್ರಬಲವಾಗಿ ವಿರೋಧಿಸಿದ್ದು, ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದ್ದು, ಅದರ ಪೌರರು ಪ್ರಜಾಪ್ರಭುತ್ವ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ಭಾರತ ಪ್ರತಿಪಾದಿಸಿದೆ.  ಈ ವೇದಿಕೆಯು ಅಂತರ ಸಂಸದೀಯ ಸಂಘಟನೆಯ ವೇದಿಕೆಯಾಗಿದ್ದು,  2030ನೇ
 ಅಭಿವೃದ್ಧಿ ಕಾರ್ಯಸೂಚಿಯನ್ನು ಮಾತ್ರ ಇಲ್ಲಿ  ಚರ್ಚಿಸಬೇಕು ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್  ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚುಚ್ಚಿದರು. 
 
ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಹಾಲಿ ಸ್ಪೀಕರ್ ಮುರ್ತಾಜಾ ಜಾವೇದ್ ಅಬ್ಬಾಸಿ ಸ್ಪೀಕರ್‌ಗಳ ನಾಲ್ಕನೇ ವಿಶ್ವಸಮ್ಮೇಳನದಲ್ಲಿ  ಜಮ್ಮು ಕಾಶ್ಮೀರದ ಜನರಿಗೆ ಸ್ವಯಂನಿರ್ಧಾರದ ಹಕ್ಕನ್ನು ಚಲಾಯಿಸಲು ಇದು ಸಕಾಲ ಎಂದು ಹೇಳಿಕೆ ನೀಡಿದ್ದರು. 
 
ಆದರೆ ಜಾಗತಿಕ ಅಭಿವೃದ್ಧಿ ಕಾರ್ಯಸೂಚಿಗೆ ಗಮನಹರಿಸುವ ವೇದಿಕೆಯಲ್ಲಿ  ಕಾಶ್ಮೀರ ವಿಷಯವನ್ನು ಎತ್ತಿದ ಪಾಕಿಸ್ತಾನದ ನಡೆಯನ್ನು ಮಹಾಜನ್ ಪ್ರಬಲವಾಗಿ ವಿರೋಧಿಸಿದ್ದರು. ಜಮ್ಮು ಕಾಶ್ಮೀರ ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪ್ರಜಾಪ್ರಭುತ್ವವಾದಿ ಚುನಾವಣೆಗಳು ರಾಜ್ಯದಲ್ಲಿ ನಡೆಯುತ್ತವೆ ಎಂದು ಮಹಾಜನ್ ಗಮನಸೆಳೆದರು. 
 
ಪಾಕಿಸ್ತಾನ ಈ ವೇದಿಕೆಯಲ್ಲಿ ಕಾಶ್ಮೀರ ವಿಷಯ ಎತ್ತುವುದು ಏಕೆ? ಅದನ್ನು ಪ್ರಶ್ನಿಸುವುದಕ್ಕೆ ಇದು ವೇದಿಕೆಯಲ್ಲ. 2030ರ ಸುಸ್ಥಿರ ಅಭಿವೃದ್ಧಿ ಗುರಿ ಇಲ್ಲಿನ ಕಾರ್ಯಸೂಚಿ ಎಂದು ಮಹಾಜನ್ ಪಾಕಿಸ್ತಾನದ ಕ್ರಮವನ್ನು ಟೀಕಿಸಿದರು. 

ವೆಬ್ದುನಿಯಾವನ್ನು ಓದಿ