ಮಗುವನ್ನು ಥಳಿಸಿ ಕೊಂದ ಭಾರತೀಯ ಮಹಿಳೆಗೆ 14 ವರ್ಷ ಜೈಲು

ಶುಕ್ರವಾರ, 28 ಆಗಸ್ಟ್ 2015 (16:55 IST)
ಕನೆಕ್ಟಿಕಟ್‌ನಲ್ಲಿ ಬೇಬಿ ಸಿಟ್ಟರ್ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಗೆ ಅಮೆರಿಕ ಫೆಡರಲ್ ಬಂಧೀಖಾನೆಯಲ್ಲಿ 14 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಗಿದೆ.  ಕಳೆದ ವರ್ಷ ಮಹಿಳೆಯ ಆರೈಕೆಯಲ್ಲಿದ್ದ 19 ತಿಂಗಳ ಮಗುವಿನ ಸಾವಿಗೆ ಸಂಬಂಧಿಸಿದಂತೆ ಮಹಿಳೆಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ.  ನ್ಯೂ ಹೇವನ್ ಮೇಲಿನ ಕೋರ್ಟ್‌‌ನಲ್ಲಿ 29 ವರ್ಷದ ಕಿಂಜಾಲ್ ಪಟೇಲ್ ಅವರು ತಪ್ಪನ್ನು ಒಪ್ಪಿಕೊಳ್ಳದಿದ್ದರೂ ಅವರ ಶಿಕ್ಷೆಗೆ ಸಾಕಷ್ಟು ಸಾಕ್ಷ್ಯಾಧಾರವಿದೆ ಎಂದು ತೀರ್ಪು ನೀಡಲಾಯಿತು.

ಯೇಲ್ ನ್ಯೂ ಹೆವೆನ್ ಆಸ್ಪತ್ರೆಯಲ್ಲಿ 19 ತಿಂಗಳ ಮಗು ಆಥಿಯನ್ ಶಿವಕುಮಾರ್‌  ಮುರಿದ ತಲೆಬುರುಡೆ ಜತೆಗೆ ಬಹುಗಾಯಗಳುಂಟಾಗಿ ಸತ್ತಿರುವ ಹಿನ್ನಲೆಯಲ್ಲಿ ಕಿಂಜಾಲ್ ಪಟೇಲ್‌ ಐದು ವರ್ಷಗಳ ಪ್ರೊಬೇಷನ್ ಅವಧಿ ಕೂಡ ಅನುಭವಿಸಬೇಕಾಗಿದೆ. ಪಟೇಲ್ ಮೊದಲಿಗೆ ಮಗುವಿಗೆ ಬೇಬಿಸಿಟ್ಟಿಂಗ್ ಮಾಡುತ್ತಿದ್ದಾಗ ನೆಲದ ಮೇಲೆ ಜಾರಿ ಬಿದ್ದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ಹೇಳಿದ್ದರು.

ನಂತರ ಮಗು ಅನ್ನವನ್ನು ತಿನ್ನದೇ ತಮ್ಮ ಮೈಮೇಲೆ ಉಗಿದಿದ್ದರಿಂದ  ಅ ಮಗುವನ್ನು ಎತ್ತಿಕೊಂಡು ಅದರ ಕಾಲನ್ನು ಅಡುಗೆಮನೆಯ ನೆಲಕ್ಕೆ ಮೂರು ಬಾರಿ ಅಪ್ಪಳಿಸಿ ತಲೆಯನ್ನು ಹಿಂದೆ ಮುಂದೆ ತಿರುಗಿಸಿದ್ದಾಗಿ ಪಟೇಲ್  ಪೊಲೀಸರಿಗೆ ಹೇಳಿದ್ದರು.  ಪಟೇಲ್ ಅಮೆರಿಕದ ಪೌರಳಲ್ಲ ಮತ್ತು ಫೆಡರಲ್ ವಲಸೆ ಅಧಿಕಾರಿಗಳು ಅವಳ ಬಿಡುಗಡೆಯಾದ ಮೇಲೆ ಭಾರತಕ್ಕೆ ಹಸ್ತಾಂತರ ಮಾಡುವ ಸಾಧ್ಯತೆಯಿದೆ ಎಂದು ಅವರ ವಕೀಲ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ