ಯಮೆನ್‌ನಲ್ಲಿ ಭಾರತೀಯರ ರಕ್ಷಣಾ ಕಾರ್ಯಾಚರಣೆ ಅಂತ್ಯ: 5600 ಮಂದಿ ಸುರಕ್ಷಿತ

ಶುಕ್ರವಾರ, 10 ಏಪ್ರಿಲ್ 2015 (09:32 IST)
ಯಮೆನ್‌ನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೈಗೊಂಡಿದ್ದ ಸ್ವದೇಶಿ ನಾಗರೀಕರ ರಕ್ಷಣಾ ಕಾರ್ಯಾಚರಣೆಯು ನಿನ್ನೆ ಅಂತ್ಯ ಕಂಡಿದ್ದು, ಇಲ್ಲಿಯವರೆಗೆ ಒಟ್ಟು 5600 ಮಂದಿ ಭಾರತೀಯರನ್ನು ತವರಿಗೆ ಕರೆತರಲಾಗಿದೆ. 
 
ಕೊನೆಯದಾಗಿ ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 349 ಮಂದಿಯನ್ನು ರಕ್ಷಿಸಲಾಗಿದೆ. ಇದರಲ್ಲಿ 46 ಮಂದಿ ಮಾತ್ರ ಭಾರತೀಯರಿದ್ದು, ಉಳಿದವರು ವಿದೇಶಿಗರು ಎನ್ನಲಾಗಿದೆ. ನಿನ್ನೆಯ ವಿಶೇಷ ಸಂಗತಿ ಎಂದರೆ 3 ದಿನದ ಹಸುಗೂಸ ಹಾಗೂ ಅದನ್ನು ಪೋಷಿಸುತ್ತಿದ್ದ ವೈದ್ಯರನ್ನೂ ಕೂಡ ಸರಕ್ಷಿತವಾಗಿ ಅವರ ರಾಷ್ಟ್ರಕ್ಕೆ ಭಾರತೀಯ ರಕ್ಷಣಾ ಪಡೆ ಸೇರಿಸಿದ್ದು, ಹೆಗ್ಗಳಿಕೆಗೆ ಪಾತ್ರವಾಗಿದೆ. ನಿನ್ನೆ ಕಾರ್ಯಾಚರಣೆ ಮುಗಿಸಿಕೊಂಡು ಬಂದ ರಕ್ಷಣಾ ವಿಮಾನ ಅಂತಿಮವಾಗಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. 
 
ಈ ಕಾರ್ಯಾಚರಣೆಯು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ನಡೆದಿದ್ದು, ಇಲ್ಲಿಯವರೆಗೆ 5600 ಮಂದಿಯನ್ನು ರಕ್ಷಿಸಲಾಗಿದೆ. ಇದರಲ್ಲಿ 4640 ಮಂದಿ ಭಾರತೀಯರಾಗಿದ್ದು, 960 ವಿದೇಶಿಯರು ಎಂದು ತಿಳಿದು ಬಂದಿದೆ. ವಿ.ಕೆ.ಸಿಂಗ್ ಅವರು ಮಾನವೀಯತೆಯ ಹಿತದೃಷ್ಟಿಯಿಂದ ವಿದೇಶಿಗರನ್ನೂ ರಕ್ಷಿಸಿರುವ ಹಿನ್ನೆಲೆಯಲ್ಲಿ ಸಚಿವರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಕೂಡ ವ್ಯಕ್ತವಾಗಿದೆ. 
 
ಇನ್ನು ಕಾರ್ಯಾಚರಣೆ ಮುಗಿಸಿಕೊಂಡು ನೇರವಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವರನ್ನು ಅವರ ಪತ್ನಿ ಭಾರತಿ ಸಿಂಗ್ ಸೇರಿದಂತೆ ಸಾಕಷ್ಟು ಮಂದಿ ನಾಗರೀಕರು ಹೂ ಗುಚ್ಛಗಳನ್ನು ನೀಡಿ ಸ್ವಾಗತಿಸಿದರು. ಅಲ್ಲದೆ ಅವರ ರಕ್ಷಣಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
 
ಈ ವೇಳೆ ಮಾತನಾಡಿದ ಅವರ ಪತ್ನಿ ಭಾರತಿ ಸಿಂಗ್, ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿಕೊಂಡು ಮತ್ತೆ ಸ್ವದೇಶಕ್ಕೆ ಮರಳಿದ್ದಾರೆ. ಅಲ್ಲದೆ ವಿದೇಶಿಗರನ್ನೂ ರಕ್ಷಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರಿಂದ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 
 
ಈ ವೇಳೆ ಮಾತನಾಡಿದ ಸಚಿವ ವಿ.ಕೆ.ಸಿಂಗ್, ಸ್ವದೇಶಿ ನಾಗರೀಕರ ರಕ್ಷಣೆಗೆಂದು ಕೈಗೊಂಡಿದ್ದ ಕಾರ್ಯಾಚರಣೆಯು ಯಶಸ್ವಿಯಾಗಿದ್ದು, ಇಲ್ಲಿಯವರೆಗೆ ಐದೂವರೆ ಸಾವಿರ ಜನರನ್ನು ರಕ್ಷಿಸಲಾಗಿದೆ. ಅಲ್ಲದೆ ಮಾನವೀಯ ಹಿತದೃಷ್ಟಿಯಿಂದ ಕೆನಡಾ, ಜರ್ಮನಿ, ಬ್ರೆಜಿಲ್ ಸೇರಿದಂತೆ ಇತರೆ ವಿದೇಶಿ ನಾಗರೀಕರನ್ನೂ ರಕ್ಷಿಸಲಾಯಿತು ಎಂದರು. 

ವೆಬ್ದುನಿಯಾವನ್ನು ಓದಿ