ಭಾರತೀಯ ವಿದ್ಯಾರ್ಥಿಗಳು ಬುದ್ಧಿವಂತರು, ಅಮೆರಿಕದಲ್ಲೇ ಉಳಿಯಲು ಅವಕಾಶ ನೀಡಬೇಕು: ಟ್ರಂಪ್

ಮಂಗಳವಾರ, 15 ಮಾರ್ಚ್ 2016 (15:43 IST)
ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಬುದ್ದಿವಂತರಾಗಿದ್ದು, ಅವರನ್ನು ದೇಶದಿಂದ ಹೊರಕ್ಕೆ ಕಳಿಸಬಾರದು. ಏಕೆಂದರೆ ನಮ್ಮ ದೇಶಕ್ಕೆ ಅಂತಹ ಬುದ್ಧಿವಂತ ಜನರ ಅಗತ್ಯವಿದೆ ಎಂದು ರಿಪಬ್ಲಿಕ್ ಅಧ್ಯಕ್ಷೀಯ ಚುನಾವಣೆ ಮುಂಚೂಣಿ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ನಾವು ಅದನ್ನು ಇಷ್ಟಪಡುತ್ತೇವೋ ಇಲ್ಲವೋ ಅವರು ಹಣ ನೀಡುತ್ತಾರೆ. ನಾವು ಅನೇಕ ಮಂದಿಗೆ ಶಿಕ್ಷಣ ನೀಡುತ್ತೇವೆ. ಅವರು ಬುದ್ದಿವಂತರಾಗಿದ್ದಾರೆ. ಇಂತಹ ಜನರು ನಮ್ಮ ದೇಶಕ್ಕೆ ಅಗತ್ಯವಿದೆ ಎಂದು ಟ್ರಂಪ್ ಉದ್ಗರಿಸಿದರು. 
 
 69 ವರ್ಷದ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಕಾನೂನುಬದ್ಧ ವಲಸ ಕುರಿತು ಅವರ ಅಭಿಪ್ರಾಯ ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.
 ಅನೇಕ ಜನರು ಈ ದೇಶದಲ್ಲಿ ಉಳಿಯಲು ಬಯಸುತ್ತಾರೆ. ಅನೇಕ ವರ್ಷಗಳ ಕಾಲ ಈ ರಾಷ್ಟ್ರದಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ವ್ಯಕ್ತಿ ಪದವೀಧರರಾದ ಕೂಡ ಅವರನ್ನು ಹೊರಕ್ಕೆ ಕಳಿಸಬಾರದು ಎಂದು ಟ್ರಂಪ್ ಹೇಳುತ್ತಾ, ಎಚ್-1ಬಿ ವೀಸಾದ ಕೆಲವು ಅಂಶಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. 
 
 ಟ್ರಂಪ್ ತಮ್ಮ ಪ್ರಚಾರದ ಆರಂಭದಿಂದಲೂ ಎಚ್‍‌-1ಬಿ ವೀಸಾ ಕಾರ್ಯಕ್ರಮ ರದ್ದು ಮಾಡಬೇಕೆಂದು ಸಲಹೆ ಮಾಡುತ್ತಿದ್ದು, ಎಚ್‌-1ಬಿ ವೀಸಾದಿಂದ ಅಮೆರಿಕನ್ನರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ಅವರ ಉದ್ಯೋಗಗಳನ್ನು ಕಸಿಯಲಾಗುತ್ತಿದೆ ಎಂದು ದೂರಿದ್ದರು.
 
 ಭಾರತದ ಐಟಿ ವೃತ್ತಿಪರರು ಮತ್ತು ಪ್ರಮುಖ ಭಾರತೀಯ ಐಟಿ ಕಂಪನಿಗಳು ಎಚ್ -1ಬಿ ವೀಸಾದ ಫಲಾನುಭವಿಗಳಾಗಿದ್ದು,ಅಮೆರಿಕದ ಮಾಲೀಕರು ತಾತ್ಕಾಲಿಕವಾಗಿ ವಿದೇಶಿ ಉದ್ಯೋಗಿಗಳನ್ನು ವಿಶೇಷ ಪರಿಣತಿಯ ಉದ್ಯೋಗಗಳಲ್ಲಿ ನೇಮಕಕ್ಕೆ ಅವಕಾಶ ನೀಡುತ್ತದೆ.

ವೆಬ್ದುನಿಯಾವನ್ನು ಓದಿ