ಉತ್ತರಪ್ರದೇಶ: ಐಎಸ್‌ಐ ಏಜೆಂಟ್‌ನನ್ನು ಬಂಧಿಸಿದ ಎಸ್‌ಟಿಎಫ್ ಪಡೆ

ಶುಕ್ರವಾರ, 27 ನವೆಂಬರ್ 2015 (20:12 IST)
ಐಎಸ್‌ಐ ಏಜೆಂಟ್‌ನಾಗಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನದ ಇರ್ಫಾನಾಬಾದ್‌ ನಗರದ ತಾರಾಮಡಿ ಚೌಕ್‌ನ ನಿವಾಸಿಯಾದ ಮೊಹಮ್ಮದ್ ಎಜಾಜ್ ಅಲಿಯಾಸ್ ಮೊಹಮ್ಮದ್ ಕಲಾಂನನ್ನು ಇಂದು ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
 
ಮೀರತ್ ಕಂಟೋನ್ಮೆಂಟ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೊಹಮ್ಮದ್. ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನು ತೆಗೆದುಕೊಂಡು ದೆಹಲಿಗೆ ತೆರಳುತ್ತಿರುವ ಸಂದರ್ಭದಲ್ಲಿ ಎಸ್‌ಡಿಎಫ್ ಪಡೆ ಬಂಧಿಸಿದೆ.
   
ಆರೋಪಿಯ ಬಳಿ ಭಾರತೀಯ ಸೇನೆಗೆ ಸಂಬಂಧಿಸಿದ ದಾಖಲೆಗಳು, ಪಾಕಿಸ್ತಾನಿ ಗುರುತಿನ ಪತ್ರ, ನಕಲಿ ವೋಟರ್ ಐಡಿ, ಬರೇಲಿ ಜಿಲ್ಲೆಯ ನಿವಾಸ ಹೊಂದಿರುವ ಆಧಾರ ಕಾರ್ಡ್, ದೆಹಲಿ ಮೆಟ್ರೋ ಕಾರ್ಡ್, ಲ್ಯಾಪ್‌ಟಾಪ್, ಪೆನ್‌ಡ್ರೈವ್‌ಗಳಿದ್ದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಟಿಎಫ್‌ ಮುಖ್ಯಸ್ಥ ಸೂರಜ್ ಪಾಂಡೆ ತಿಳಿಸಿದ್ದಾರೆ.
 
ಭಾರತೀಯ ಸೇನೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪಾಕಿಸ್ತಾನ ಐಎಸ್‌ಐ, ಏಜೆಂಟ್‌‍ನನ್ನು ಬಾಂಗ್ಲಾದೇಶದ ಮೂಲಕ ಪಶ್ಚಿಮ ಉತ್ತರಪ್ರದೇಶದಿಂದ ಭಾರತದೊಳಗೆ ಕಳುಹಿಸಿದ್ದ ಬಗ್ಗೆ ರಹಸ್ಯ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
 
ವಿಚಾರಣೆ ಸಂದರ್ಭದಲ್ಲಿ ಕಳೆದ 2012ರಲ್ಲಿ ಐಎಸ್‌ಐನೊಂದಿಗೆ ಸಂಪರ್ಕ ಸಾಧಿಸಿದ್ದು, ಭಾರತದಲ್ಲಿ ಕಾರ್ಯನಿರ್ವಹಿಸುವಂತೆ ತರಬೇತಿ ನೀಡಿತ್ತು. ಪಶ್ಚಿಮ ಉತ್ತರಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿರುವ ಸೇನಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವಂತೆ ಐಎಸ್‌ಐ ಆದೇಶ ನೀಡಿತ್ತು ಎಂದು ಆರೋಪಿ ಮೊಹಮ್ಮದ ಕಲಾಂ ಬಾಯಿಬಿಟ್ಟಿದ್ದಾನೆ.
 

ವೆಬ್ದುನಿಯಾವನ್ನು ಓದಿ