ಭಯೋತ್ಪಾದನೆ ತರಬೇತಿಗೆ ಐಎಸ್‌ನಿಂದ 111 ಇರಾಕಿ ಮಕ್ಕಳ ಅಪಹರಣ

ಮಂಗಳವಾರ, 7 ಜುಲೈ 2015 (14:59 IST)
ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಉತ್ತರ ಇರಾಕಿನ ಮೊಸುಲ್‌ನ ವಿವಿಧ  ಜಿಲ್ಲೆಗಳಿಂದ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದಕ್ಕಾಗಿ  111 ಶಾಲಾ ಮಕ್ಕಳನ್ನು ಅಪಹರಿಸಿದ್ದಾರೆ.

ಸುಮಾರು 10-15 ವರ್ಷ ವಯಸ್ಸಿನ ಮುಗ್ಧ ಮಕ್ಕಳನ್ನು ಐಎಸ್ ಭಯೋತ್ಪಾದಕ ಗುಂಪಿನ ಶಿಕ್ಷಣ ಮತ್ತು ಮಿಲಿಟರಿ ಕೇಂದ್ರಗಳಿಗೆ ವರ್ಗಾಯಿಸಿ ಬ್ರೈನ್‌ವಾಷ್ ಮಾಡಿದ ಬಳಿಕ ಕ್ರೂರ ಕೃತ್ಯಗಳಿಗೆ ಬಳಸಿಕೊಳ್ಳುತ್ತಾರೆಂದು ಇರಾಕಿನ ಕುರ್ದಿಸ್ತಾನ್ ಡೆಮಾಕ್ರಟಿಕ್ ಪಕ್ಷದ ವಕ್ತಾರ ಸಯೀದ್ ಮಮುಜಿನಿ ತಿಳಿಸಿದ್ದಾರೆ.  ಐಎಸ್ ಭಯೋತ್ಪಾದಕರು ತಮ್ಮ ಮಕ್ಕಳ ಅಪಹರಣದ ವಿರುದ್ಧ ಪ್ರತಿಭಟಿಸಿದ 78 ಪುರುಷರನ್ನು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ. 
 
ಉಗ್ರಗಾಮಿಗಳು ದೇಶದ ಅತೀ ದೊಡ್ಡ ನಗರ ಮೊಸುಲ್‌ ಕೈವಶ ಮಾಡಿಕೊಂಡ ಬಳಿಕ ಒಂದು ವರ್ಷದ ಅವಧಿಯಲ್ಲಿ 1420 ಮಕ್ಕಳನ್ನು ಅಪಹರಿಸಿದ್ದು, ಅವರಿಗೆ ಮಿಲಿಟರಿ ತರಬೇತಿಯನ್ನು ಬಲವಂತವಾಗಿ ನೀಡಿದ ಬಳಿಕ ಐಎಸ್ ಅವರನ್ನು ಭಯೋತ್ಪಾದನೆ ಮತ್ತು ಗುಪ್ತಚರ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತದೆ.

ಮೊಸುಲ್‌ನ ಈಶಾನ್ಯದ ಬಾಶಿಖಾ ಪಟ್ಟಣದಲ್ಲಿ ಉಗ್ರರು ಸೋಲನುಭವಿಸಿದ ಬಳಿಕ ಐಎಸ್ ಭಯೋತ್ಪಾದಕರು ತಮ್ಮ ಗುಂಪಿಗೇ ಸೇರಿದ 15 ಉಗ್ರರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ವಾಸ್ತವ ಸಂಗತಿ ಏನೆಂದರೆ ಇವರನ್ನು ಹತ್ಯೆ ಮಾಡುವುದಕ್ಕೆ ತಾನು ತರಬೇತಿ ನೀಡಿದ್ದ ಮಕ್ಕಳನ್ನೇ ಬಳಸಿಕೊಂಡಿತ್ತು.
 
ದಿಯಾಲಾ ಪೂರ್ವ ಪ್ರಾಂತ್ಯ ಮತ್ತು ಅಲ್ ಅನ್ಬಾರ್ ಪಶ್ಚಿಮ ಪ್ರಾಂತ್ಯದಲ್ಲಿ ಐಎಸ್ ಭಯೋತ್ಪಾದಕರು 500 ಮಕ್ಕಳನ್ನು ಅಪಹರಿಸಿದೆಯೆಂದು ಇರಾಕಿ ಸ್ಥಳೀಯರು ಮತ್ತು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ