ಹುಟ್ಟಿದಾಗ ಅಪಹರಣ; 18 ವರ್ಷದ ಬಳಿಕ ತಾಯಿ ಮಗಳ ಪುನರ್ಮಿಲನ

ಮಂಗಳವಾರ, 17 ಜನವರಿ 2017 (08:46 IST)
ಹುಟ್ಟಿದ ಕೆಲ ಗಂಟೆಗಳಲ್ಲಿಯೇ ತಾಯಿಯಿಂದ ದೂರವಾಗಿದ್ದ ಮಗಳು 18 ವರ್ಷದ ಬಳಿಕ ತಾಯಿಯ ಮಡಿಲು ಸೇರಿದ ಹೃದಯ ಕಲಕುವ ಘಟನೆ ಅಮೇರಿಕಾದಲ್ಲಿ ನಡೆದಿದೆ. 
ನವಜಾತ ಶಿಶುವಾಗಿದ್ದಾಗ ಅಪಹರಣಕ್ಕೆ ಒಳಗಾಗಿದ್ದ ಕಮಿಯಾ ಮೊಬ್ಲೆ ಶೋಧಕ್ಕಿಳಿದಿದ್ದ ಪೊಲೀಸರು ಬರೊಬ್ಬರಿ 18 ವರ್ಷಗಳ ಬಳಿಕ ಯಶಸ್ಸು ಸಾಧಿಸಿದ್ದಾರೆ.  
 
ಜುಲೈ 10, 1998ರಲ್ಲಿ ಜಾಕ್ಸನ್‌ವಿಲ್ಲೆ ಆಸ್ಪತ್ರೆಯಲ್ಲಿ ಜನಿಸಿದ್ದ ಕಮಿಯಾ ಹುಟ್ಟಿ 8 ಗಂಟೆಗಳಲ್ಲಿ ನಾಪತ್ತೆಯಾಗಿದ್ದಳು. ನರ್ಸ್ ವೇಷದಲ್ಲಿ ಬಂದ ಮಹಿಳೆಯೋರ್ವಳು ನವಜಾತ ಶಿಶುವನ್ನು ಕದ್ದುಕೊಂಡು ಪರಾರಿಯಾಗಿದ್ದಳು.
 
ತನ್ನ ಮಗುವನ್ನು ಕಳೆದುಕೊಂಡ ಕಮಿಯಾ ತಾಯಿ ಶನಾರಾ ಆ ನೋವನ್ನು ಮನೆಯದಾದಳು. ಪ್ರತಿವರ್ಷ ಆಕೆಯ ಜನ್ಮದಿನದಂದು ಕೇಕ್ ತಂದು ಕತ್ತರಿಸುತ್ತಿದ್ದಳು. ಮಗುವಿಗಾಗಿ ಹುಡುಕಾಟವನ್ನು ಸಹ ಆಕೆ ಜಾರಿಯಲ್ಲಿಟ್ಟಿದ್ದಳು. 
 
ತನಿಖೆಯನ್ನು ಮುಂದುವರೆಸಿದ್ದ ಪೊಲೀಸರು 2,500 ಸುಳಿವುಗಳನ್ನು ಆಧರಿಸಿ ಗ್ಲೊರಿಯಾ ವಿಲಿಯಮ್ಸ್ (51) ಎಂಬ ಮಹಿಳೆಯನ್ನೀಗ ಬಂಧಿಸಿದ್ದಾರೆ.
 
18 ವರ್ಷದ ಕಮಿಯಾ ಆರೋಗ್ಯವಾಗಿದ್ದು, ಶನಿವಾರ ತನ್ನ ನಿಜವಾದ ತಂದೆ-ತಾಯಿಯನ್ನು ಸೇರಿದ್ದಾಳೆ. ಡಿಎನ್‌ಎ ಪರೀಕ್ಷಾ ಫಲಿತಾಂಶ ಅವರ ಸಂಬಂಧವನ್ನು ಖಚಿತಪಡಿಸಿದೆ. ಈ ಮಿಲನ ಭಾವಪೂರ್ಣವಾಗಿದ್ದು ನೆರೆದವರ ಕಣ್ಣಲ್ಲಿ ನೀರು ತರಿಸಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ