ಬೇನಜೀರ್ ಭುಟ್ಟೊ ಹತ್ಯೆ ಪ್ರಕರಣ: ಉಲ್ಟಾ ಹೊಡೆದ ಪ್ರಾಸಿಕ್ಯೂಷನ್ ಸಾಕ್ಷಿ

ಮಂಗಳವಾರ, 7 ಜುಲೈ 2015 (15:41 IST)
ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬ ಭಯೋತ್ಪಾದನೆ ವಿರೋಧಿ ಕೋರ್ಟ್‌ನ ಎದುರು ಪಾಟೀ ಸವಾಲಿಗೆ ಉತ್ತರಿಸುವಾಗ ತನ್ನ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದ ಘಟನೆ ಸಂಭವಿಸಿದೆ. ನಿವೃತ್ತ ಎಸ್ಎಸ್‌ಪಿ ಇಮ್ತಿಯಾಜ್ ಬೇನಜೀರ್ ಭುಟ್ಟೊ ಅವರ ಪ್ರಮುಖ ಭದ್ರತಾ ಅಧಿಕಾರಿಯಾಗಿದ್ದು ಪ್ರಾಸಿಕ್ಯೂಷನ್ ಸಾಕ್ಷಿಯಾಗಿದ್ದರು.

ಆದರೆ ಸೋಮವಾರ ನ್ಯಾಯಾಧೀಶ ರಾಯ್ ಮೊಹಮದ್ ಅಯೂಬ್ ಮಾರ್ತ್ ಮುಂದೆ ತಮ್ಮ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದು ಭುಟ್ಟೊಗೆ ಪೂರ್ಣ ಸ್ವರೂಪದ ಭದ್ರತೆಯನ್ನು ಲಿಯಾಖತ್ ಭಾಗ್ ಹೊರಗೆ ಒದಗಿಸಲಾಗಿತ್ತೆಂದು ಸಾಕ್ಷ್ಯ ನುಡಿದರು.  2007ರ ಡಿ. 27ರಂದು ಭುಟ್ಟೊ ಅವರನ್ನು ಬಂದೂಕು ಮತ್ತು ಬಾಂಬ್ ದಾಳಿಯ ಮೂಲಕ ಹತ್ಯೆ ಮಾಡಲಾಗಿತ್ತು.  ಭುಟ್ಟೊಗೆ ಭದ್ರತೆ ನೀಡಲು ಎಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರೆಂದು ಅವರು ಹೇಳಿದ್ದಾರೆ. 
 
ಭುಟ್ಟೊ ಅವರನ್ನು ಲಿಯಾಕತ್ ಭಾಗ್‌ನಲ್ಲಿ  ಅಸಮರ್ಪಕ ಭದ್ರತಾ ವ್ಯವಸ್ಥೆಯಿದ್ದ ಹಿನ್ನೆಲೆಯಲ್ಲಿ ಭುಟ್ಟೊ ಹತ್ಯೆಗೊಳಗಾದರು ಎಂದು ಇಮ್ತಿಯಾಜ್  ಈ ಮುಂಚೆ ಹೇಳಿಕೆ ನೀಡಿದ್ದರು. ಆದರೆ ಹಿಂದೆ ನೀಡಿದ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ಈಗ ನೀಡಿದ್ದು, ಭುಟ್ಟೊಗೆ ಫುಲ್ ಸೆಕ್ಯುರಿಟಿ ನೀಡಲಾಗಿತ್ತೆಂದು ತಿಳಿಸಿದ್ದಾರೆ.   ಬೇನಜೀರ್ ವಾಹನದ ತೆರೆದಛಾವಣಿಯಿಂದ ಕಾಣಿಸಿಕೊಳ್ಳದಿದ್ದರೆ ಅವರು ಬಹುಶಃ ಹತ್ಯೆಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ