ಕೊರಿಯಾ ಯುದ್ಧದಲ್ಲಿ ಅಮೆರಿಕದ ಅಪರಾಧಗಳಿಗೆ ಸೇಡು: ಕಿಮ್ ಜಾಂಗ್ ಶಪಥ

ಶನಿವಾರ, 25 ಜುಲೈ 2015 (16:16 IST)
1950-53ರ ಕೊರಿಯಾ ಯುದ್ಧದಲ್ಲಿ ಅಮೆರಿಕ ಎಸಗಿದ ಯುದ್ಧಾಪರಾಧಗಳಿಗೆ ತಾನು ಸೇಡುತೀರಿಸಿಕೊಳ್ಳುವುದಾಗಿ ಉತ್ತರ ಕೊರಿಯಾ ಮುಖಂಡ ಕಿಮ್ ಜಾನ್ ಉನ್ ಶಪಥ ಮಾಡಿದ್ದಾರೆ.  ಯುದ್ಧವನ್ನು ಕೊನೆಗಾಣಿಸುವ ಒಪ್ಪಂದದ 62ನೇ ವಾರ್ಷಿಕಕ್ಕೆ ಐದು ದಿನಗಳು ಬಾಕಿವುಳಿದಿರುವಾಗ ಕಿಮ್ ಈ ಶಪಥ ಮಾಡಿದ್ದಾರೆ. 
ಉತ್ತರ ಕೊರಿಯಾವು ಕೊರಿಯನ್ನರ ರಕ್ತಪಾತಕ್ಕೆ ಶಸ್ತ್ರಾಸ್ತ್ರಗಳೊಂದಿಗೆ ಅಮೆರಿಕದ ವಿರುದ್ಧ  ಸೇಡುತೀರಿಸಿಕೊಳ್ಳುವುದಾಗಿ ಕೊರಿಯಾದ ಕೆಸಿಎನ್‌ಎ ವರದಿ ಮಾಡಿದೆ. 
 
 ಅಮೆರಿಕಾದ ಯುದ್ಧದ ದೌರ್ಜನ್ಯಗಳನ್ನು ಬಿಂಬಿಸುವ ಸಿಂಚನ್ ಮ್ಯೂಸಿಯಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿಮ್ ಮೇಲಿನಂತೆ ತಿಳಿಸಿದ್ದಾರೆ. ಉತ್ತರ ಕೊರಿಯಾ ರಾಜಧಾನಿ ಪ್ಯಾಂಗ್ ಯಾಂಗ್‌ನಲ್ಲಿರುವ ಈ ಮ್ಯೂಸಿಯಂನಲ್ಲಿ ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದದ ವಾರ್ಷಿಕೋತ್ಸವ ಅಂಗವಾಗಿ ಅಲ್ಲಿಗೆ ಆಗಮಿಸಿದ್ದರು. ಈ ಒಪ್ಪಂದದಿಂದಾಗಿ ಕೊರಿಯಾ ಎರಡು ಭಾಗಗಳಾಗಿ ಒಡೆದುಹೋಗಿತ್ತು. 
 
 ಈ ಮ್ಯೂಸಿಯಂ ಶಿಕ್ಷಣದ ಕೇಂದ್ರವಾಗಿದ್ದು ಶತ್ರುವಿನ ವಿರುದ್ಧ ಸೇಡುತೀರಿಸಿಕೊಳ್ಳುವ ಮೂಲವಾಗಿದೆ. ಅಮೆರಿಕದ ಹೇಯ ದೌರ್ಜನ್ಯಗಳಿಗೆ ಸಾಕ್ಷಿಯಾಗಿರುವ ಐತಿಹಾಸಿಕ ಸ್ಥಳ  ಎಂದು ಕೆಸಿಎನ್‍‌ಎ ವರದಿ ಮಾಡಿದೆ.  
 
ಇತಿಹಾಸದಲ್ಲಿ ಅತ್ಯಂತ ರಕ್ತಪಾತದ ಹೊಳೆ ಹರಿಸಿದ ಯುದ್ಧದಲ್ಲಿ ಕೊರಿಯಾದ ಉಪಖಂಡದ ಇಡೀ ನಗರಗಳು ನಾಮಾವಶೇಷವಾಗಿ 2.5 ದಶಲಕ್ಷ ಜನರನ್ನು ಬಲಿತೆಗೆದುಕೊಂಡಿದೆ. 

ವೆಬ್ದುನಿಯಾವನ್ನು ಓದಿ