ಮತ್ತಷ್ಟು ಅಣ್ವಸ್ತ್ರ ಪರೀಕ್ಷೆ ನಡೆಸಲು ಕಿಮ್ ಜಾಂಗ್ ಉನ್ ಆದೇಶ

ಶುಕ್ರವಾರ, 11 ಮಾರ್ಚ್ 2016 (13:02 IST)
ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಪಡೆಗಳು ನಡೆಸುತ್ತಿರುವ ದೊಡ್ಡ ಮಟ್ಟದ ಜಂಟಿ ಸಮರಾಭ್ಯಾಸವನ್ನು ಪ್ಯಾಂಗ್ ಯಾಂಗ್ ಖಂಡಿಸಿದ್ದು, ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಮತ್ತಷ್ಟು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಲು ಆದೇಶಿಸಿದ್ದಾರೆ. ಸೋಮವಾರ ಜಂಟಿ ಸಮರಾಭ್ಯಾಸ ಆರಂಭವಾದಾಗಿನಿಂದ, ಉತ್ತರ ಕೊರಿಯಾ ಎಚ್ಚರಿಕೆಗಳನ್ನು ಮತ್ತು ಹೇಳಿಕೆಗಳನ್ನು ನೀಡುತ್ತಿದೆ. ತಮ್ಮ ರಾಷ್ಟ್ರದ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಕೊಚ್ಚಿಕೊಂಡಿರುವ ಕಿಮ್ ಜಾಂಗ್ ಉನ್, ಸಿಯೋಲ್ ಮತ್ತು ವಾಷಿಂಗ್ಟನ್ ರಾಜ್ಯಗಳನ್ನು ಜ್ವಾಲೆ ಮತ್ತು ಬೂದಿಯಾಗಿ ಪರವರ್ತಿಸುವುದಾಗಿ ಎಚ್ಚರಿಸಿದ್ದಾರೆ. 
 
ಕಿಮ್ ಜಾನ್ ಉನ್ ಅವರು ಸಣ್ಣ ಪ್ರಮಾಣದ ಅಣ್ವಸ್ತ್ರ ಸಿಡಿತಲೆ ಮುಂದೆ ಛಾಯಾಚಿತ್ರಕ್ಕೆ ಭಂಗಿ ನೀಡಿದ ಕೆಲವೇ ದಿನಗಳಲ್ಲಿ ಈ ಅಸ್ತ್ರವನ್ನು ಇನ್ನಷ್ಟು ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದಿದ್ದಾರೆ. 
 
 ಗುರುವಾರ ಖಂಡಾಂತರ ಕ್ಷಿಪಣಿ ಉಡಾವಣೆಯ ಮೇಲ್ವಿಚಾರಣೆ ವಹಿಸಿದ ಕಿಮ್ ನೂತನವಾಗಿ ನಿರ್ಮಿಸಿದ ಅಣ್ವಸ್ತ್ರ ಸಿಡಿತಲೆಗಳ ವಿನಾಶಕ ಶಕ್ತಿಯನ್ನು ಅಂದಾಜು ಮಾಡಲು ಇನ್ನಷ್ಟು ಅಣ್ವಸ್ತ್ರ ಸ್ಫೋಟಗಳ ಪರೀಕ್ಷೆಗಳಿಗೆ ಆದೇಶಿಸಿದರು. 
 
ಸಿಡಿತಲೆಗಳನ್ನು ಖಂಡಾಂತರ ಕ್ಷಿಪಣಿಗೆ ಜೋಡಿಸುವುದಕ್ಕೆ ಸಾಧ್ಯವಾದ ಗಾತ್ರಕ್ಕೆ ಕುಗ್ಗಿಸುವುದಕ್ಕೆ ಉತ್ತರ ಕೊರಿಯಾಗೆ ಎಷ್ಟರಮಟ್ಟಿಗೆ ಸಾಧ್ಯವಾಗಬಹುದೆಂಬ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯವಿದೆ. ಇದು ಸಾಧ್ಯವಾದರೆ ಉತ್ತರ ಕೊರಿಯಾದ ದಾಳಿ ಸಾಮರ್ಥ್ಯದಲ್ಲಿ ದಾಪುಗಾಲು ಹಾಕಲಿದೆ ಮತ್ತು ದಕ್ಷಿಣ ಕೊರಿಯಾ ಮತ್ತಿತರ ರಾಷ್ಟ್ರಗಳಿಗೆ ಹೆಚ್ಚಿನ ಬೆದರಿಕೆಯಾಗಿದೆ. 
 

ವೆಬ್ದುನಿಯಾವನ್ನು ಓದಿ