ಭಾರತದ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನ ಸರ್ಕಾರ ಕಡೆಗೂ ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಝಕಿ ಉರ್ ರೆಹಮಾನ್ ಲಖ್ವಿಯನ್ನು ಜೈಲಿನಿಂದ ಬಿಡುಗಡೆ ಮಾಡಿದೆ. ಲಖ್ವಿ ಬಿಡುಗಡೆ ವಿರೋಧಿಸಿ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಲಖ್ವಿಯನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ನಿನ್ನೆ ಲಾಹೋರ್ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ರಾವಲ್ಪಿಂಡಿ ಜೈಲಿನಿಂದ ರಹಸ್ಯವಾಗಿ ಉಗ್ರನನ್ನು ಬಿಡುಗಡೆ ಮಾಡಲಾಗಿದೆ.
ಲಾಹೋರ್ ಕೋರ್ಟ್ ಲಖ್ವಿ ಬಿಡುಗಡೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ್ದ ಭಾರತ, ಮುಂಬೈ ದಾಳಿಯ ರೂವಾರಿ ಜೈಲಿನಿಂದ ಹೊರ ಬರದಂತೆ ನೋಡಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಪಾಕಿಸ್ತಾನ ಸರ್ಕಾರ ತೆಗೆದುಕೊಳ್ಳಬೇಕು ಮತ್ತು ಈ ಕುರಿತು ಭಾರತಕ್ಕೆ ಖಚಿತಪಡಿಸಬೇಕು ಎಂದು ಒತ್ತಾಯಿಸಿತ್ತು.
ಪಾಕಿಸ್ತಾನ ಸರ್ಕಾರ ಲಖ್ವಿಯ ರಹಸ್ಯ ದಾಖಲೆ ಪತ್ರಗಳು ಮತ್ತು ಆತನ ಚಟುವಟಿಕೆಯ ವಿವರ ಸಲ್ಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಲಾಹೋರ್ ಕೋರ್ಟ್, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಯಿದೆಯಡಿ ಲಖ್ವಿ ಬಂಧನವನ್ನು ರದ್ದುಗೊಳಿಸಿ, ಬಿಡುಗಡೆಗೆ ಆದೇಶಿಸಿತ್ತು.