ಲಖ್ವಿಗೆ ಮತ್ತೆ ಕೈ ಹಿಡಿದ ಬಿಡುಗಡೆ ಭಾಗ್ಯ: ಲಾಹೋರ್ ಹೈಕೋರ್ಟ್ ಆದೇಶ

ಗುರುವಾರ, 9 ಏಪ್ರಿಲ್ 2015 (16:21 IST)
26/11ರ ಮುಂಬೈ ದಾಳಿ ರೂವಾರಿ, ಉಗ್ರ ಜಾಕಿ-ಉರ್-ರೆಹಮಾನ್ ಲಖ್ವಿ ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಇಲ್ಲಿನ ಸರ್ಕಾರಕ್ಕೆ ಇಂದು ಆದೇಶ ಹೊರಡಿಸಿದೆ. 
 
ಜಾಮೀನು ಸಿಕ್ಕರೂ ಕೂಡ ಸರ್ಕಾರ ಅಧಿಸೂಚನೆ ಹೊರಡಿಸಿ ಜೈಲಿನಲ್ಲಿರಿಸಲಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಉಗ್ರ ಲಖ್ವಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಹೈಕೋರ್ಟ್,  ಅಧಿಸೂಚನೆಯ ನೆಪ ಹೇಳಿಕೊಂಡು ತಡ ಮಾಡಬೇಡಿ. ಲಖ್ವಿ ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ಆದೇಶಿಸಿದೆ. 
 
ಭಾರತದ ಮುಂಬೈ ದಾಳಿ ಸೇರಿದಂತೆ ವಿಶ್ವದ ಹಲವೆಡೆ ಸಾಕಷ್ಟು ಭಯೋತ್ಪಾದನಾ ಕೃತ್ಯಗಳನ್ನು ಎಸಗಿದ್ದಾನೆ ಎಂಬ ಆರೋಪ ಹಿನ್ನೆಲೆಯಲ್ಲಿ ಲಖ್ವಿಯನ್ನು ಬಂಧಿಸಿಲಾಗಿತ್ತು. ಈ ಹಿನ್ನೆಲೆಯಲ್ಲಿ ಲಖ್ವಿ, ಬಂಧನದ ಬಳಿಕ ಜಾಮೀನಿಗಾಗಿ ಕೆಳ ಹಂತದ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ, ಜಾಮೀನು ಮಂಜೂರು ಮಾಡಿತ್ತು. ಆದರೆ ಹಲವು ಕೃತ್ಯಗಳನ್ನು ಎಸಗಿರುವ ಉಗ್ರನನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನ ಸರ್ಕಾರವನ್ನು ಭಯೋತ್ಪಾದನೆಗೀಡಾಗಿದ್ದ ಹಲವು ರಾಷ್ಟ್ರಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು. ಅಲ್ಲದೆ ಲಖ್ವಿ ಬಿಡುಗಡೆಯನ್ನು ತೀವ್ರವಾಗಿ ಖಂಡಿಸಿದ್ದವು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ವಿಶೇಷ ಅಧಿಸೂಚನೆ ಹೊರಡಿಸುವ ಮೂಲಕ ಬಂಧನದ ಅವಧಿಯನ್ನು ವಿಸ್ತರಿಸಿತ್ತು. ಆದರೆ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಲಖ್ವಿ ಲಾಹೋರ್ ಹೈಕೋರ್ಟ್ ಮೊರೆ ಹೋಗಿದ್ದ. ಪರಿಣಾಮ ಕೋರ್ಟ್ ಇಂದು ಬಿಡುಗಡೆಗೊಳಿಸುವಂತೆ ಆದೇಶಿಸಿ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ವೆಬ್ದುನಿಯಾವನ್ನು ಓದಿ