ಮುಂಬೈ ದಾಳಿಕೋರ ಲಖ್ವಿ ಪಾಕ್ ಜೈಲಿನಲ್ಲಿ ಐಷಾರಾಮಿ ಜೀವನ

ಸೋಮವಾರ, 2 ಮಾರ್ಚ್ 2015 (12:56 IST)
2008ನೇ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಲಷ್ಕರೆ ತೊಯ್ಬಾ ಕಾರ್ಯಾಚರಣೆ ಕಮಾಂಡರ್  ಜಕಿವುರ್  ರೆಹ್ಮಾನ್ ಲಖ್ವಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದೇವೆ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಭಾರತದ ವಿರುದ್ಧ ಭಯೋತ್ಪಾದನೆ ದಾಳಿ ನಡೆಸಿದ ಲಖ್ವಿಗೆ ಜೈಲಿನಲ್ಲಿ ಐಷಾರಾಮಿ ಜೀವನಕ್ಕೆ ಎಲ್ಲಾ ಅನುಕೂಲವನ್ನು ಮಾಡಿಕೊಡಲಾಗಿದೆ.

ಇಂಟರ್ನೆಟ್, ಮೊಬೈಲ್ ಫೋನ್‌ಗಳೊಂದಿಗೆ ಅವನಿಗೆ ಪರಿಚಿತರ ಭೇಟಿಗೂ ಅವಕಾಶ ನೀಡಲಾಗುತ್ತಿದೆ.ಲಖ್ವಿ ಪಾಕಿಸ್ತಾನದ ಅತ್ಯಂತ ಕುಖ್ಯಾತ ಭಯೋತ್ಪಾದಕ, ಮುಂಬೈನಲ್ಲಿ ರಕ್ತದ ಕೋಡಿ ಹರಿಸಿದ ಅವನು ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಐಷಾರಾಮಿ ಜೀವನ ಶೈಲಿಗೆ ಜೈಲಿನ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.  2008ರಲ್ಲಿ 166 ಜನರನ್ನು ಬಲಿತೆಗೆದುಕೊಂಡ ಮುಂಬೈ ದಾಳಿಯಲ್ಲಿ ಲಖ್ವಿ ಸೇರಿದಂತೆ 8 ಜನರ ವಿರುದ್ಧ ದಾಳಿಗೆ ಯೋಜಿಸಿದ ಆರೋಪ ಹೊರಿಸಲಾಗಿತ್ತು.

ಇಂತಹ ಗಂಭೀರ ಆರೋಪಗಳನ್ನು ಹೊತ್ತಿದ್ದರೂ ಲಖ್ವಿ ಮತ್ತು ಅವನ ಸಹಚರ ಹಂತಕರಿಗೆ ಜೈಲರ್ ಕಚೇರಿಯ ಪಕ್ಕದಲ್ಲೇ ಅನೇಕ ಕೋಣೆಗಳನ್ನು ನೀಡಲಾಗಿದೆ.ಹತ್ತಾರು ಜನರು ಲಖ್ವಿಯನ್ನು ನೋಡಲು ಬರುತ್ತಿದ್ದರೂ ಅವರ ಗುರುತು ತಿಳಿಯಲು ಕೂಡ ಜೈಲಿನ ಅಧಿಕಾರಿಗಳು ಯತ್ನಿಸುತ್ತಿಲ್ಲ.ಲಖ್ವಿ ಎಷ್ಟೇ ಅತಿಥಿಗಳನ್ನು ಬೇಕಾದರೂ ಕರೆಸಬಹುದು. ದಿನ, ರಾತ್ರಿ ವಾರದಲ್ಲಿ ಏಳು ದಿನಗಳ ಕಾಲ ಅತಿಥಿಗಳು ಬರಬಹುದು ಎಂದು ಜೈಲಿನ ಅಧಿಕಾರಿಯೊಬ್ಬರು ಹೇಳಿದರು.

 ಇದನ್ನು ಬೇರೆ ದೇಶಗಳಲ್ಲಿ ಯೋಚಿಸಲೂ ಸಾಧ್ಯವಿಲ್ಲ. ಕೆಲವು ಜೈಲಿನಲ್ಲಿ ಬಂಧಿತರಾದ ಉಗ್ರಗಾಮಿ ಕಮಾಂಡರ್‌ಗಳಿಗೆ ರಾಷ್ಟ್ರೀಯ ಭದ್ರತೆಯ ಕೆಲವು ಕಾರಣಗಳಿಗೆ ಬೇಕಾಗಬಹುದೆಂದು ಭಾವಿಸಿ ಇಂತಹ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.2008ರ ಡಿಸೆಂಬರ್‌ನಲ್ಲಿ ಬಂಧಿತನಾದ ಲಖ್ವಿ ಕಳೆದ ಐದು ವರ್ಷಗಳಿಂದ ಅಡಿಯಾಲ ಜೈಲಿನಲ್ಲಿದ್ದಾನೆ. 

ವೆಬ್ದುನಿಯಾವನ್ನು ಓದಿ