ಹಿರೋಶಿಮಾ ನಗರದ ಮೇಲೆ ಅಣು ಬಾಂಬ್ ಹಾಕಿದ್ದ ಪೈಲಟ್ ನಿಧನ

ಗುರುವಾರ, 31 ಜುಲೈ 2014 (11:38 IST)
ಜಗತ್ತಿನ ಘೋರ ಪಾತಕ ಕೃತ್ಯಗಳಲ್ಲೊಂದಾದ ಜಪಾನ್‌ನ ಹಿರೋಶಿಮಾ ನಗರದ ಮೇಲೆ ಅಣು ಬಾಂಬ್ ಹಾಕಿದ್ದ 'ಎನೊಲಾ ಗೇ' ವಿಮಾನದ ಪೈಲಟ್ ಥಿಯೋಡರ್ ವ್ಯಾನ್ ಕ್ರಿಕ್ ಅವರು ಬುಧವಾರ ನಿಧನ ಹೊಂದಿದ್ದಾರೆ. ಅ ಮೂಲಕ ಆ ಮಹಾದುರಂತದಲ್ಲಿ ಪ್ರತ್ಯಕ್ಷ ಪಾಲ್ಗೊಂಡಿದ್ದ ಕೊನೆಯ ಕೊಂಡಿ ಕಳಚಿಕೊಂಡಿದೆ.

ತಾವು ವಾಸವಾಗಿದ್ದ  ಜಾರ್ಜಿಯಾದ ಸ್ಟೋನ್ ಮೌಂಟೇನ್ ಪಾರ್ಕ್ ಸ್ಪ್ರಿಂಗ್ಸ್‌ ನಿವೃತ್ತಿ ಸಮುದಾಯದಲ್ಲಿ   ಅವರು ಸಹಜ ಸಾವನ್ನಪ್ಪಿದ್ದು, ತಮ್ಮ ತಂದೆ ಕ್ರಿಕ್ ಅವರಿಗೆ 93 ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಟಾಮ್ ವ್ಯಾನ್‌ಕ್ರಿಕ್ ಅವರು ತಿಳಿಸಿದ್ದಾರೆ.
 
''ಎರಡನೇ ಮಹಾ ಯುದ್ಧದಲ್ಲಿ ನಮ್ಮಪ್ಪ ಧೀರಯೋಧರಾಗಿದ್ದರು ಮತ್ತು ಅವರು ನಮಗೆ ಒಬ್ಬ ಒಳ್ಳೆಯ ಅಪ್ಪ ಮಾತ್ರ ಆಗಿದ್ದರು,'' ಎಂದು ಟಾಮ್ ಕ್ರಿಕ್ ತಿಳಿಸಿದ್ದಾರೆ.
 
2005ರಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ಕ್ರಿಕ್  ''ಯುದ್ಧ ಮತ್ತು ಅಣು ಬಾಂಬ್ ಯಾವ ಸಮಸ್ಯೆಗೂ ಪರಿಹಾರವಲ್ಲ. ಅದರಿಂದ ರಾಜಿ ಒಪ್ಪಂದ ನಡೆಯದು,'' ಎಂದು ಪ್ರತಿಕ್ರಿಯಿಸಿದ್ದರು.
 
ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ  ಆಗಸ್ಟ್ 6,1945 ರಂದು ಜಪಾನ್‌ನ ಹಿರೋಶಿಮಾ ನಗರದ ಮೇಲೆ 'ಲಿಟ್ಲ್‌ಬಾಯ್' ಎಂಬ ಅಣು ಬಾಂಬ್ ಪ್ರಯೋಗಿಸಿದ 'ಎನೊಲಾ ಗೇ' ನೇವಿಗೇಟರ್  ಆಗಿದ್ದ ಕ್ರಿಕ್ ಅವರಿಗೆ ಆಗ 24 ವರ್ಷವಾಗಿತ್ತು.ತಮ್ಮ ಇಳಿ ವಯಸ್ಸಿನಲ್ಲೂ ಅವರು ಅತ್ಯಂತ ಚುರುಕಾಗಿದ್ದರು ಎಂದು ಹೇಳಲಾಗುತ್ತಿದೆ. 
 
ಸುಮಾರು 8.15ಕ್ಕೆ ಬೀಳಿಸಲಾಗಿದ್ದ ಬಾಂಬ್‌ನಿಂದ ದಕ್ಷಿಣ ಜಪಾನಿನ ಬಂದರು ನಗರದ ಅರ್ಧ ಜನಸಂಖ್ಯೆ ನಾಶವಾಗಿದ್ದು, ಸುಮಾರು 70,000 ಜನರು ತಕ್ಷಣ ಕೊಲ್ಲಲ್ಪಟ್ಟಿದ್ದರು ಮತ್ತು ಒಟ್ಟಿನಲ್ಲಿ 140,000 ಜನರು ಕೊನೆಯುಸಿರೆಳೆದಿದ್ದರು.  ಇದು ಜಗತ್ತಿನ ಯುದ್ಧದ ಇತಿಹಾಸದಲ್ಲಿ ಬಳಸಲಾದ ಮೊದಲ ಪರಮಾಣು ಬಾಂಬ್.  

ವೆಬ್ದುನಿಯಾವನ್ನು ಓದಿ