ನೆರೆಯ ಪಾಕಿಸ್ತಾನಕ್ಕೂ ಬಂತೇ ಎಬೋಲಾ!

ಮಂಗಳವಾರ, 25 ನವೆಂಬರ್ 2014 (13:32 IST)
ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಎಬೋಲಾ ನೆರೆಯ ಪಾಕಿಸ್ತಾನದಲ್ಲೂ ಕಂಡು ಬಂದಿದೆ ಎಂಬ ವರದಿಗಳು ಪ್ರಕಟವಾಗಿದ್ದು, ಭಾರತದಲ್ಲಿ ಆತಂಕಕ್ಕೆ ಕಾರಣವಾಗಿದೆ. ಎಬೋಲಾ ಕಾಯಿಲೆಯಂತಿದ್ದ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಮರವನ್ನಪ್ಪಿದ್ದಾನೆ ಎಂದು  ಮಾಧ್ಯಮಗಳಲ್ಲಿ ವರದಿಯಾಗಿದೆ. 

ಕಳೆದ ವಾರವಷ್ಟೇ ಟೋಗೋದಿಂದ ಹಿಂತಿರುಗಿದ್ದ ಝಲ್‌ಪೀಕರ್ ಅಹಮದ್ ಎಂಬ 40 ವರ್ಷದ ವ್ಯಕ್ತಿಗೆ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿದ್ದು ಪಾಕ್ ಪಂಜಾಬ್‌ನ ಚಿನಿಓತ್ ನಗರದಲ್ಲಿನ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆದರೆ ಕಾಯಿಲೆ ಉಲ್ಭಣವಾಗಿ ಆತ ಸೋಮವಾರ ಮರಣವನ್ನಪ್ಪಿದ್ದಾನೆ ಎಂದು ಮಾಹಿತಿ ಲಭಿಸಿದೆ.
 
ಮೃತ ರೋಗಿಯ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಇಸ್ಲಾಮಾಬಾದ್‌ನ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ಐಎಚ್) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ಫಲಿತಾಂಶಗಳು ಬರಲು ಕನಿಷ್ಠ ಎರಡು ವಾರಗಳಾದರೂ ಬೇಕಿದ್ದು, ನಂತರವಷ್ಟೇ ಆತ ಸತ್ತಿದ್ದು ಎಬೋಲಾದಿಂದ ಅಥವಾ ಬೇರೆ ಇನ್ಯಾವುದೋ ಕಾಯಿಲೆಯಿಂದ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿದು ಬಂದಿದೆ.
 
ಎಬೋಲಾ ಎನ್ನುವುದು ಈ ಶತಮಾನದಲ್ಲಿ ಕಂಡುಬಂದಿರುವ ಮಾರಕ ರೋಗವಾಗಿದೆ. ಕ್ಯಾನ್ಸರ್, ಏಡ್ಸ್‌ಗಿಂತಲೂ ಹೆಚ್ಚು ಭಯಾನಕವಾದ ಈ ರೋಗ ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ವಿಶ್ವದಾದ್ಯಂತ ಆತಂಕವನ್ನು ಸೃಷ್ಟಿಸಿದೆ. ವೈರಸ್‌ನಿಂದ, ಹರಡುವ ಈ ಸಾಂಕ್ರಾಮಿಕ ರೋಗ ಮೊದಲು ಕಾಣಿಸಿಕೊಂಡದ್ದು 1976ರಲ್ಲಿ. ರಿಪಬ್ಲಿಕ್ ಆಫ್ ಕಾಂಗೋ ದೇಶದ ಎಬೋಲಾ ಎಂಬ ನದಿ ತಟದ ಯಂಬಕು ಎಂಬ ಪುಟ್ಟ ಹಳ್ಳಿಯಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದಲೇ ಈ ರೋಗಕ್ಕೆ ಎಬೋಲಾ ಎಂಬ ಹೆಸರು ಬಂದಿದೆ. 

ವೆಬ್ದುನಿಯಾವನ್ನು ಓದಿ