ಪಾಕ್‌ನಲ್ಲಿ ಉಗ್ರರ ದಾಳಿ: 135 ಕ್ಕೂ ಅಧಿಕ ವಿದ್ಯಾರ್ಥಿಗಳ ಸಾವು, 65 ಮಂದಿ ರಕ್ಷಣೆ

ಮಂಗಳವಾರ, 16 ಡಿಸೆಂಬರ್ 2014 (18:21 IST)
ಇಲ್ಲಿನ ಪೇಶಾವರದಲ್ಲಿನ ಸೈನಿಕ ಶಾಲೆಯ ಮೇಲೆ ಇಂದು ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದ ಹಿನ್ನೆಲೆ ಪಾಕ್ ಸೈನಿಕರು ಅಂತಿಮ ಕಾರ್ಯಾಚರಣೆ ನಡೆಸಿದ್ದು, 8 ಮಂದಿ ಉಗ್ರರನ್ನು ಹತ್ಯೆ ಗೈಯ್ಯುವ ಮೂಲಕ ಒಟ್ಟು 65 ಮಕ್ಕಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. 
 
ಉಗ್ರರ ಅಟ್ಟಹಾಸಕ್ಕೆ ಶಾಲೆಯ 10 ಮಂದಿ ಸಿಬ್ಬಂದಿಗಳೂ ಸೇರಿದಂತೆ ಒಟ್ಟು 135 ಮಕ್ಕಳನ್ನು ಹತ್ಯೆಗೈದಿದ್ದಾರೆ. ಇದಲ್ಲದೆ ಘಟನೆಯಲ್ಲಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಲ್ಲಿನ ಲೇಡಿ ರೀಡರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಎಲ್ಲರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ ಎನ್ನಲಾಗಿದೆ.   
 
ಇನ್ನು ಸುರಕ್ಷಿತವಾಗಿ ಹೊರ ಬಂದಿರುವ ಮಕ್ಕಳು ಮಾಧ್ಯಮಗಳೆದುರು ಪ್ರತಿಕ್ರಿಯಿಸಿದ್ದು, ನಾವು ಪರೀಕ್ಷೆ ಬರೆಯುತ್ತಿದ್ದೆವು. ಈ ವೇಳೆ ಏಕಾ ಏಕಿ ಶಾಲಾ ಕೊಠಡಿಗೆ ನುಗ್ಗಿದ ಕಪ್ಪು ಬಟ್ಟೆ ವೇಷಧಾರಿಗಳು ನಮ್ಮನ್ನು ಗಲಾಟೆ ಮಾಡದಂತೆ ಸೂಚಿಸಿದರು. ಬಳಿಕ ಮೊದಲು ಶಿಕ್ಷಕಿಯನ್ನು ಸಜೀವವಾಗಿ ದಹಿಸಿದರು. ಅನಂತರ ಶಾಲೆಯ ಇತರೆ ಸಿಬ್ಬಂದಿಯನ್ನು ಗುಂಡು ಹಾರಿಸುವ ಮೂಲಕ ಹತ್ಯೆಗೈದರು. ಅವರ ಬಳಿಕ ನಮ್ಮನ್ನೂ ಸಾಲು ಸಾಲಾಗಿ ನಿಲ್ಲಿಸಿ ಒಬ್ಬರ ನಂತರ ಒಬ್ಬರನ್ನು ಎದೆ, ಕಾಲು ಹಾಗೂ ತಲೆಗಳಿಗೆ ಗುಂಡು ಹಾರಿಸುತ್ತಾ ಸಾಯಿಸುತ್ತಿದ್ದರು. ಸುಮಾರು 15-20 ಮಂದಿಯನ್ನು ಹತ್ಯೆಗೈಯ್ಯುವ ವೇಳೆಗೆ ಸೈನಿಕರು ಶಾಲೆಗೆ ಆಗಮಿಸಿದ್ದರು. ಆದರೆ ಕಾರ್ಯಾಚರಣೆ ವಿಳಂಬವಾದದ್ದರಿಂದ ನಮ್ಮ ಹಲವಾರು ಸ್ನೇಹಿತರು ನಮ್ಮ ಕಣ್ಣ ಮುಂದೆಯೇ ಹತರಾದರು. ಇನ್ನೇನೂ ನಮ್ಮ ಮೇಲೂ ಗುಂಡು ಹಾರಿಸುತ್ತಾರೆ ಎಂದು ತಿಳಿದು ಕೊಂಡಿದ್ದೆವು. ಅಷ್ಟರಲ್ಲಿ ಸೈನಿಕರ ಕಾರ್ಯಾಚರಣೆಯೊಂದಿಗೆ ಪ್ರಾಣಾಪಾಯದಿಂದ ಪಾರಾದೆವು ಎಂದು ತಿಳಿಸಿದ್ದಾರೆ.    
 
ಇನ್ನು ಘಟನೆ ಹಿನ್ನೆಲೆ ಪಾಕಿಸ್ತಾನದಲ್ಲಿ 3 ದಿನಗಳ ಕಾಲ ಶೋಕಾಚರಣೆಗೆ ಪ್ರಧಾನಿ ನವಾಜ್ ಷರೀಫ್ ಘೋಷಿಸಿದ್ದಾರೆ. ಘಟನೆಯ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಅಕ್ಬರುದ್ದೀನ್ ಸೇರಿದಂತೆ ದೇಶದ ಇತರೆ ಗಣ್ಯರು ಕೃತ್ಯವನ್ನು ಖಂಡಿಸಿದ್ದು, ಇದು ಹೇಡಿಗಳು ಎಸಗುವ ನೀಚ ಕೃತ್ಯ ಎಂದಿದ್ದಾರೆ. 
 
ಈ ಹಿಂದೆ ತಾಲಿಬಾನ್ ಕಾರ್ಯಪಡೆ ಮೇಲೆ ಪಾಕ್ ರಕ್ಷಣಾ ಸಿಬ್ಬಂದಿ ದಾಳಿ ನಡೆಸಿ ಹಲವು ಕಾರ್ಯಕರ್ತರನ್ನು ಹತ್ಯೆಗೈದಿದ್ದರು. ಇದರ ಪ್ರತಿಕಾರ ತೀರಿಸಿಕೊಳ್ಳಲು ಶಾಲೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಅಲ್ಲದೆ ತಾಲಿಬಾನ್ ಹಸುಗೂಸುಗಳನ್ನು ಕೊಲ್ಲದೆ ಪ್ರೌಢಾವಸ್ಥೆಗೆ ಬಂದಿರುವ ಮಕ್ಕಳನ್ನು ಗುಂಡಿಕ್ಕಿ ಕೊಲ್ಲಿ ಎಂದು  ತನ್ನ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. 
 
ಇಲ್ಲಿನ ಸೈನಿಕ ಶಾಲೆಗೆ ಇಂದು ಬೆಳಗ್ಗೆ 10.30ರ ವೇಳೆಯಲ್ಲಿ ಏಕಾಏಕಿ ನುಗ್ಗಿದ್ದ ಆರು ಮಂದಿ ಉಗ್ರರು, 500 ಮಂದಿ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ