ವಿಶ್ವದ ಹಿರಿಯಜ್ಜಿ ನಿಧನ

ಗುರುವಾರ, 2 ಏಪ್ರಿಲ್ 2015 (13:09 IST)
ಜಗತ್ತಿನ ಅತಿ ಹಿರಿಯ ವಯಸ್ಸಿನ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಪಾನ್‌ನ ಮಿಸಾವೊ ಒಕಾವಾ ( 117) ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರು ಮಾರ್ಚ್ 5, 1898 ರಲ್ಲಿ ಜನಿಸಿದ್ದರು ಎಂದು ಹೇಳಲಾಗುತ್ತಿದೆ. 

ಹೃದಯಾಘಾತಕ್ಕೆ ಒಳಗಾದ ಅವರು ಒಸಾಕಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಒಕಾವಾರವರ ಕುಟುಂಬದ ಮೂಲಗಳು ಖಚಿತ ಪಡಿಸಿವೆ. 
 
ಕಳೆದ ಮಾರ್ಚ್ 5 ರಂದು ತಮ್ಮ 117 ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದ ಒಕಾವಾ ಮೂವರು ಮಕ್ಕಳು, ನಾಲ್ಕು ಮೊಮ್ಮಕ್ಕಳು ಮತ್ತು 6 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ. 
 
ದಿನಕ್ಕೆ 8 ತಾಸು ನಿದ್ದೆ ಮತ್ತು ಇಷ್ಟವಾದ ಆಹಾರ ಸೇವೆ ನನ್ನ ದೀರ್ಘಾಯುಷ್ಯದ ರಹಸ್ಯ ಎಂದು ಅವರು ಹೇಳುತ್ತಿದ್ದರು. 
 
"ಸೌಮ್ಯ ಸ್ವಭಾವದ ಆಕೆ ತಿನ್ನುವುದನ್ನು ತುಂಬ ಇಷ್ಟ ಪಡುತ್ತಿದ್ದರು. ಅವರ ನೆಚ್ಚಿನ ಆಹಾರ ಸುಶಿ ಮತ್ತು ಉಡಾನ್ ನ್ಯೂಡಲ್ಸ್ ಆಗಿದ್ದವು. ಕಳೆದ ಮಾರ್ಚ್ 5 ರಂದು 117 ನೇ ಜನ್ಮದಿನವನ್ನಾಚರಿಸಿಕೊಂಡಿದ್ದ ಆಕೆ ತುಂಬಾ ಕೇಕ್ ತಿಂದಿದ್ದಳು. ಆದರೆ ಕಳೆದ 10 ತಿಂಗಳಿಂದ ಆಕೆ ತಿನ್ನುವುದನ್ನು ನಿಲ್ಲಿಸಿದ್ದರು. ತಿನ್ನುವುದೇ ಅಜ್ಜಿಗೆ ಇಷ್ಟು ದೀರ್ಘ ಅವಧಿ ಬದುಕಲು ಪ್ರೇರೇಪಣೆ ನೀಡಿರಬೇಕು. ಆ ಆಸಕ್ತಿಯನ್ನು ಕಳೆದುಕೊಂಡ ತಕ್ಷಣ ಆಕೆ ಪ್ರಾಣ ಬಿಟ್ಟಳು",  ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ