ಬ್ರೂಸೆಲ್ಸ್‌ಗೆ ಆಗಮಿಸಿದ ಪ್ರಧಾನಿ ಮೋದಿ: ಬೆಲ್ಜಿಯಂ ಪ್ರಧಾನಿಯೊಂದಿಗೆ ಚರ್ಚೆ

ಬುಧವಾರ, 30 ಮಾರ್ಚ್ 2016 (13:41 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಬ್ರೂಸೆಲ್ಸ್ ನಗರಕ್ಕೆ ಆಗಮಿಸಿದ್ದು, ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮಿಚೈಲ್ ಅವರೊಂದಿಗೆ ಇಂಡೋ-ಯುರೋಪ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಲ್ಲದೇ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ವಾರ ನಡೆದ ಉಗ್ರರ ಆತ್ಮಾಹುತಿ ದಾಳಿಯ ಕರಿನೆರಳಿನ ಹಿನ್ನೆಲೆಯಲ್ಲಿ ಶೃಂಗಸಭೆ ಮತ್ತು ದ್ವಿಪಕ್ಷೀಯ ಚರ್ಚೆಯಲ್ಲಿ ಭಯೋತ್ಪಾದನೆ ಮೂಲ ಚರ್ಚಾವಿಷಯವಾಗುವ ಸಾಧ್ಯತೆಗಳಿವೆ. ಮೇಕ್ ಇನ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಯುರೋಪ್ ಸಹಭಾಗಿತ್ವವನ್ನು ಮೋದಿ ಬಯಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
 
ಬೆಲ್ಜಿಯಂ ರಾಜಧಾನಿ ಬ್ರೂಸೆಲ್ಸ್‌ಗೆ ಆಗಮಿಸುತ್ತಿದ್ದಂತೆ ಪ್ರಧಾನಿ ಮೋದಿಯವರಿಗೆ ರೆಡ್ ಕಾರ್ಪೆಟ್‌ನ ಭವ್ಯವಾದ ಸ್ವಾಗತ ದೊರೆಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ. 
 
ಕಳೆದ ಮಾರ್ಚ್ 22 ರಂದು ನಡೆದ ಉಗ್ರರ ದಾಳಿಯಲ್ಲಿ ಬೆಂಗಳೂರು ಇನ್ಫೋಸಿಸ್ ಕಂಪೆನಿಯ ಉದ್ಯೋಗಿಯಾಗಿದ್ದ ರಾಘವೇಂದ್ರನ್ ಗಣೇಶನ್ ಸೇರಿದಂತೆ ಒಟ್ಟು 32 ಜನರ ಹತ್ಯೆಯಾಗಿತ್ತು. 
 
13ನೇ ಇಂಡಿಯಾ-ಯುರೋಪ್ ಶೃಂಗಸಭೆ ಸುಮಾರು ನಾಲ್ಕು ವರ್ಷಗಳ ಅಂತರದ ನಂತರ ಆಯೋಜಿಸಲಾಗುತ್ತಿದೆ. ಕಳೆದ 2012ರಲ್ಲಿ ನಡೆದ ಶೃಂಗಸಭೆಯಲ್ಲಿ ಕೈಗೊಂಡ ಅನೇಕ ಸಂಧಾನಗಳು ಜಾರಿಗೆ ಬಾರದೆ ನೆನೆಗುದಿಗೆ ಬಿದ್ದಿದ್ದವು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ