ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತೆ: ಪ್ರಧಾನಿ ಮೋದಿಗೆ ಮುಷರಫ್ ಬೆದರಿಕೆ

ಬುಧವಾರ, 22 ಅಕ್ಟೋಬರ್ 2014 (18:10 IST)
ನೆರೆಹೊರೆಯ ರಾಷ್ಟ್ರಗಳೆರಡೂ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಪ್ರಯತ್ನದಲ್ಲಿರುವ ನಡುವೆ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್  ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ್ದು,  ಪಾಕಿಸ್ತಾನ  ಕುರಿತ ದೃಷ್ಟಿಕೋನ ಬದಲಿಸದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.  ಪಾಕಿಸ್ತಾನದ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮುಷರಫ್  ಮೋದಿ ಮುಸ್ಲಿಂ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಎಂದು ಹೇಳಿದ್ದಾರೆ.
 
ಮೋದಿ ಅವರ ವರ್ತನೆಯಿಂದ ಅವರು ಮುಸ್ಲಿಂ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರಲ್ಲಿ ಸಂಶಯವೇ ಇಲ್ಲ. ನಮಗೆ ಹಾನಿಮಾಡಬಹುದೆಂಬ ಯಾವುದೇ ಅನುಮಾನವೂ ಅವರ ತಲೆಯಲ್ಲಿರಬಾರದು. ನಾವು ಪ್ರಬಲ ರಾಷ್ಟ್ರವಾಗಿದ್ದು, ಅಣ್ವಸ್ತ್ರ ಬಲವನ್ನು ಹೊಂದಿದ್ದೇವೆ. ಆದ್ದರಿಂದ ಮೋದಿಯನ್ನು ನಾವು  ವೈಸರಾಯ್ ರೀತಿಯಲ್ಲಿ ನಡೆಸಿಕೊಳ್ಳಬಾರದು. ಮೋದಿಗೆ ನಾವು ಮಣೆ ಹಾಕದೇ ಅವರ ಪಾಡಿಗೆ ಬಿಡುವುದು ಸರಿ ಎಂದು ಪರ್ವೇಜ್ ಹೇಳಿದ್ದಾರೆ. 
 
ಭಾರತದ ಪ್ರಧಾನಿ ಮೇಲೆ ಪರ್ವೇಜ್ ವಾಗ್ದಾಳಿಗೆ ಕಾಂಗ್ರೆಸ್ ಮುಖಂಡ ರಷೀದ್ ಅಲ್ವಿ ಪ್ರತಿಕ್ರಿಯಿಸಿ ಭಾರತದ ಆಂತರಿಕ ವಿಚಾರಗಳಲ್ಲಿ ತಲೆತೂರಿಸಬಾರದು ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಾಂಬಿತ್ ಪಾತ್ರಾ ಕೂಡ ಮುಷರಫ್ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಪ್ರಯತ್ನಕ್ಕೆ ಶತ್ರು ಎಂದಿದ್ದಾರೆ. 
 
ಸಚಿವ ವಿ.ಕೆ. ಸಿಂಗ್ ಮುಷರಫ್ ಒಬ್ಬ ರೋಗಗ್ರಸ್ಥ ಮನುಷ್ಯ ಎಂದು ಕರೆದಿದ್ದಾರೆ. ಅವರು ಚಿಕಿತ್ಸೆ ಪಡೆಯುತ್ತಿದ್ದ,ರೋಗಪೀಡಿತ ಮನುಷ್ಯ ಏನು ಬೇಕಾದರೂ ಬಡಬಡಿಸಬಹುದು. ನಾವೇಕೆ ಆ ಬಗ್ಗೆ ಚಿಂತಿಸಬೇಕು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ