ಪಾಕ್ ಮತ್ತು ಬಾಂಗ್ಲಾದಲ್ಲಿರುವ ಮುಸ್ಲಿಮರು ಮೂಲತಃ ಹಿಂದೂಗಳು: ಪಾಕ್ ಲೇಖಕಿ

ಗುರುವಾರ, 1 ಅಕ್ಟೋಬರ್ 2015 (13:07 IST)
ಪಾಕ್ ಮತ್ತು ಬಾಂಗ್ಲಾದಲ್ಲಿರುವ ಮುಸ್ಲಿಮರು ಮೂಲತಃ ಹಿಂದೂಗಳು ಎಂದು ಹೇಳುವ ಮೂಲಕ ಪಾಕಿಸ್ತಾನ ಹಿರಿಯ ಲೇಖಕಿ ಫೌಝಿಯಾ ಸೈಯ್ಯದ್ ಹಾವಿನ ಹುತ್ತಕ್ಕೆ ಕೈ ಹಾಕಿದ್ದಾರೆ. 

ಸುದ್ದಿಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸುದ್ದಿವಾಹಿನಿಯೊಂದರಲ್ಲಿ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಫೌಝಿಯಾ, 'ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ವಾಸವಾಗಿರುವ ಎಲ್ಲ ಮುಸ್ಲಿಮರು ಮೂಲತಃ ಹಿಂದೂಗಳು. ಅವರ ಪೂರ್ವಿಕರು ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದರು. ಅವರಲ್ಲಿ ಕೆಲವರು ಬೌದ್ಧರು ಕೂಡ ಆಗಿರಬಹುದು',  ಎಂದಿದ್ದಾರೆ.
 
ಪಾಕಿಸ್ತಾನದ ಮೂಲಭೂತವಾದಿ ಮುಸ್ಲಿಂ ಬೋಧಕ ಜೈದ್ ಹಮೀದ್ ವಾದಕ್ಕೆ ಪ್ರತಿಕ್ರಿಯಿಸಿದ ಅವರು, "ಹೆಚ್ಚಿನ ಪಾಕ್ ಮುಸ್ಲಿಮರು ತಾವು ಮುಸ್ಲಿಂ ಪ್ರಾಬಲ್ಯ ಉಳ್ಳ ಪ್ರದೇಶಗಳಿಂದ ಉಪಖಂಡದ ಮೇಲೆ ದಾಳಿ ಮಾಡಿದ ಆಕ್ರಮಣಕಾರರ ಸಂತಾನ ಎಂಬ ಭ್ರಮೆಯಲ್ಲಿದ್ದಾರೆ. ಇದು ತಪ್ಪು. ಪ್ರತಿಶತ 99 ರಷ್ಟು ಪಾಕಿಸ್ತಾನ ಮುಸ್ಲಿಮರ ಪೂರ್ವಜರು ಹಿಂದೂಗಳಾಗಿದ್ದರು ಎಂಬುದು ತಿಳುವಳಿಕೆಯುಳ್ಳ ಪ್ರತಿಯೊಬ್ಬರಿಗೂ ಗೊತ್ತು. ಈ ಸತ್ಯವನ್ನು ಪಾಕಿಸ್ತಾನ ಒಪ್ಪಿಕೊಳ್ಳುವುದಿಲ್ಲ ಎನ್ನುವುದರ ಮೂಲಕ ಅವರು ದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ ಮತ್ತು ಅಪಾಯಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. 
 
ಪಾಕ್ ಉಗ್ರರಿಗೆ ಬೆಂಬಲ ನೀಡುತ್ತಿರುವುದನ್ನು ಖಂಡಿಸಿದ ಅವರು ಪಾಕಿಸ್ತಾನದಲ್ಲಿ ಒಸಮಾ ಬಿನ್ ಲಾಡೆನ್‌ನನ್ನು ಅಮೆರಿಕಾ ಕೊಂದ ನಂತರ ಪಾಕ್‌ನ ಮುಖವಾಡ ಕಳಚಿ ಬಿದ್ದಿದೆ ಎಂದು ಹೇಳಿದ್ದಾರೆ.
 
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಭಾರತದ ಹಲವು ವಿದ್ವಾಂಸರು ಸಹ ಹಲವು ಬಾರಿ ಈ ಪಾಕ್ ಮತ್ತು ಬಾಂಗ್ಲಾ ಮುಸ್ಲಿಮರು ಹಿಂದೂಗಳು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. 

ವೆಬ್ದುನಿಯಾವನ್ನು ಓದಿ