ನೀವಿನ್ನು ಹೊರಡಿ: ಭಾರತ ಸೇರಿದಂತೆ ವಿವಿಧ ದೇಶಗಳ ರಕ್ಷಣಾ ಪಡೆಗಳಿಗೆ ನೇಪಾಳ ಸೂಚನೆ

ಮಂಗಳವಾರ, 5 ಮೇ 2015 (16:47 IST)
ನಮ್ಮ ದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಸಾಕು, ಇನ್ನು ನಿಮ್ಮ ನಿಮ್ಮ ದೇಶಗಳಿಗೆ ವಾಪಸ್ಸಾಗಿ ಎಂದು ಭಾರತದ ರಾಷ್ಟ್ರೀಯ ದುರಂತ ಪರಿಹಾರ ಪಡೆ (ಎನ್‌ಡಿಆರ್‌ಎಫ್) ಸೇರಿದಂತೆ 34 ದೇಶಗಳ ರಕ್ಷಣಾ ಮತ್ತು ಪರಿಹಾರ ತಂಡಗಳಿಗೆ ನೇಪಾಳ ಸರಕಾರ ಸೋಮವಾರ ಸೂಚನೆ ನೀಡಿದೆ.

ಹಳ್ಳಿಗಳು ಮತ್ತು ಬೆಟ್ಟಗುಡ್ಡಗಳಲ್ಲಿರುವ ಗ್ರಾಮಗಳಲ್ಲಿ ಬಹಳಷ್ಟು ಕೆಲಸಗಳಿವೆ. ಈ ಕೆಲಸಕಾರ್ಯಗಳನ್ನು ಸ್ಥಳೀಯ ಪೊಲೀಸರು ಮತ್ತು ಸೇನೆಯ ಜೊತೆಗೆ ವಿದೇಶಗಳ ಕೆಲ ತಂಡಗಳು ಮುಂದುವರಿಸುತ್ತಾರೆ ಎಂದು  ನೇಪಾಳ ಸರಕಾರ ತಿಳಿಸಿದೆ.
 
ನೇಪಾಳದಲ್ಲಿ ಕಳೆದ  11 ದಿನಗಳ ಹಿಂದೆ ಭೀಕರ ಭೂಕಂಪ ಸಂಭವಿಸಿದಾಗ ಎಲ್ಲರಿಗಿಂತ ಮೊದಲು ಭಾರತ ನೆರವಿಗೆ ಧಾವಿಸಿತ್ತು.  
 
"ಅವರೆಲ್ಲರೂ ಹಿಂತಿರುಗಬಹುದು. ಒಂದು ವೇಳೆ ಅವರು ಅವಶೇಷಗಳನ್ನು ಸ್ವಚ್ಛಗೊಳಿಸುವುದರಲ್ಲಿ ಪರಿಣಿತರಾಗಿದ್ದರೆ, ಅಂತವರು  ಇಲ್ಲೇ ಇರಬಹುದು", ಎಂದು ನೇಪಾಳದ ಗೃಹ ಸಚಿವಾಲಯ ಅಧಿಕಾರಿಯಾದ ರಾಮೇಶ್ವರ್ ಡಂಗಲ್ ತಿಳಿಸಿದ್ದಾರೆ. ದೇಶದಲ್ಲಿ ಸಾವಿನ ಸಂಖ್ಯೆ 10,000 ದಾಟಬಹುದು ಎಂದು  ನೇಪಾಳದ ಪ್ರಧಾನಿ  ಸುಶೀಲ್ ಕೊಯಿರಾಲಾ ಕಳೆದ ವಾರವೇ ಆತಂಕ ವ್ಯಕ್ತಪಡಿಸಿದ್ದರು. 
 
ಭಾರತದ ರಾಷ್ಟ್ರೀಯ ದುರಂತ ಪರಿಹಾರ ಪಡೆ  ಪ್ರತಿ 16 ತಂಡಗಳಾಗಿ ( ಪ್ರತಿ ಗುಂಪಿನಲ್ಲಿ 50 ಸದಸ್ಯರು) ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಕಾರ್ಯಾಚರಣೆಗೆ ವಿವಿಧ ದೇಶಗಳು ಕಳುಹಿಸಿರುವ ಸಿಬ್ಬಂದಿಗಳಲ್ಲಿ ಭಾರತದ ಸಂಖ್ಯೆಯೇ ಹೆಚ್ಚು.   ಜಪಾನ್, ಟರ್ಕಿ, ಉಕ್ರೈನ್, ಯುಕೆ ಮತ್ತು ನೆದರ್ಲ್ಯಾಂಡ್ಸ್ ಇತರ ದೇಶಗಳ ರಕ್ಷಣಾ ಪಡೆಗಳು ಸಹ ನೇಪಾಳದಿಂದ ಹಿಂತಿರುಗಲು ಆರಂಭಿಸಿವೆ. 

ವೆಬ್ದುನಿಯಾವನ್ನು ಓದಿ