ಸರ್ವನಾಶವಾದರೂ ಸ್ಥಿರವಾಗಿ ನಿಂತಿದ್ದಾನೆ ಪಶುಪತಿನಾಥ

ಮಂಗಳವಾರ, 28 ಏಪ್ರಿಲ್ 2015 (11:19 IST)
ಕಳೆದ ಶನಿವಾರ ಭೂತಾಯಿ ತೋರಿಸಿದ ಉಗ್ರ ಮುನಿಸಿಗೆ ಇಡೀ ನೇಪಾಳವೇ ಅಲ್ಲಾಡಿದರೂ ಪಶುಪತಿನಾಥ ಮಾತ್ರ ಸ್ಥಿರವಾಗಿ ನಿಂತಿದ್ದಾನೆ. ಭಾರತವೂ ಸೇರಿದಂತೆ ವಿಶ್ವದ ಹಿಂದೂಗಳ ಆರಾಧ್ಯ ದೈವವಾದ ಪಶುಪತಿನಾಥನ ಮಂದಿರದಲ್ಲಿ ಒಂದು ಪುಟ್ಟ ಬಿರುಕು ಸಹ ಬಿಟ್ಟಿಲ್ಲ ಎಂದು ವರದಿಯಾಗಿದೆ.

5 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಈ ದೇವಸ್ಥಾನ  ಕಟ್ಟಡ ನಿರ್ಮಾಣದಲ್ಲಿ ನಮ್ಮ ಪೂರ್ವಜರು ಹೊಂದಿದ್ದ ಕೌಶಲ್ಯವನ್ನು ಸಾಬೀತುಪಡಿಸಿದೆ. "ನಾವು ಅನೇಕ ಬಾರಿ ಪರಿಶೀಲಿಸಿದ್ದೇವೆ. ಆದರೆ ದೇಗುಳದಲ್ಲಿ ಎಲ್ಲಿಯೂ ಸಹ ಬಿರುಕು ಕಂಡುಬಂದಿಲ್ಲ", ಎಂದು ಭಕ್ತನೊಬ್ಬ ಹೇಳಿದ್ದಾನೆ. 
 
7.9 ಪರಿಮಾಣದ ರಿಕ್ಟರ್ ಮಾಪಕದಲ್ಲಿ ಭೂ ಅಲ್ಲಾಡುತ್ತಿದ್ದಂತೆ ಭಾರತಕ್ಕೆ ಅಂಟಿಕೊಂಡಿರುವ ಈ ಪುಟ್ಟ ದೇಶದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನೋಡ ನೋಡುತ್ತಿದ್ದಂತೆಯೇ ಉರುಳಿ ಬಿದ್ದವು.  ಆದರೆ ಕ್ರಿಶ 400 ರಲ್ಲಿ ನಿರ್ಮಾಣವಾಗಿದ್ದು ಎಂದು ಹೇಳಲಾಗುವ ಪಶುಪತಿನಾಥ ದೇವಸ್ಥಾನದಲ್ಲಿ ಒಂದು ಕಲ್ಲು ಸಹ ಅಲ್ಲಾಡಿಲ್ಲ. 
 
"ನಾನು ಕಚೇರಿ, ಅಂಗಡಿ ಎಲ್ಲಿಯೂ ಹೋಗುತ್ತಿಲ್ಲ. ಪದೇ ಪದೇ ಭೂಮಿ ಕಂಪಿಸುತ್ತಿದ್ದು, ಈ ದೇಗುಲ ಮಾತ್ರ ನಮಗೆ ಅತ್ಯಂತ ಸುರಕ್ಷಿತ ಸ್ಥಳವೆನಿಸಿರುವುದರಿಂದ ನಾನು ಇಲ್ಲಿಯೇ ತಂಗಿದ್ದೇನೆ", ಎಂದು ಅವಘಡದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡಿರುವ ವ್ಯಕ್ತಿಯೊಬ್ಬ ಹೇಳುತ್ತಾನೆ.
 
ನೇಪಾಳದಲ್ಲಿ ಭೂಮಿ ಕಂಪಿಸುವುದು ಇಂದು ಸಹ ಮುಂದುವರೆದಿದ್ದು ಜನರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ