ಭಾರತ ನಮ್ಮ ಜೀವನ ರಕ್ಷಕ: ನೇಪಾಳ ಪ್ರಧಾನಿ

ಶನಿವಾರ, 2 ಮೇ 2015 (13:39 IST)
ಭಯಾನಕ ಭೂಕಂಪಕ್ಕೆ ತುತ್ತಾಗಿ ನಲುಗಿ ಹೋಗಿರುವ ನೇಪಾಳಕ್ಕೆ ಎಲ್ಲ ವಿಧದಲ್ಲೂ ಸಹಕಾರ ನೀಡಿರಲು ಟೊಂಕ ಕಟ್ಟಿ ನಿಂತಿರುವ ಭಾರತದ ಸೇವಾ ಕಾರ್ಯಕ್ಕೆ ಅಭಿಮಾನ ವ್ಯಕ್ತಪಡಿಸಿರುವ ನೇಪಾಳದ ಪ್ರಧಾನಮಂತ್ರಿ ಸುಶೀಲ್ ಕೊಯಿರಾಲಾ ಭಾರತದಂತಹ ನೆರೆರಾಷ್ಟ್ರವನ್ನು ಹೊಂದಿರುವ ದೇಶವೇ ಧನ್ಯ ಎಂದಿದ್ದಾರೆ. ಜತೆಗೆ ಭಾರತವನ್ನು ಜೀವನ ರಕ್ಷಕ ಎಂದು ಹೊಗಳಿದ್ದಾರೆ.

"ಭಾರತವನ್ನು ನೆರೆಯ ದೇಶವನ್ನಾಗಿ ಹೊಂದಿರುವುದು ನಮ್ಮ ಸೌಭಾಗ್ಯ. ನೇಪಾಳಕ್ಕೆ ಸಂಕಷ್ಟ ಬಂದಾಗಲೆಲ್ಲ ಭಾರತ ಪ್ರಾಮಾಣಿಕವಾಗಿ ನೆರವಿಗೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲು ತಾವು ತೆರಳಿದಾಗ ಭಾರತೀಯ ಪಡೆಯ ಕ್ರಿಯಾಶೀಲತೆಯನ್ನು ನೋಡಿ ದಂಗಾಗಿ ಹೋಗಿದ್ದೇನೆ", ಎಂದು ಅವರು ಹೇಳಿದ್ದಾರೆ. 
 
"ನೇಪಾಳದ ಭೂಕಂಪ ಪೀಡಿತ ಪ್ರದೇಶಗಳಲ್ಲಿ ತ್ವರಿತವಾಗಿ ತಲುಪಿ ತನ್ನಿಂದಾದ ಎಲ್ಲ ಸಹಾಯವನ್ನು ಮಾಡಿದ, ಮಾಡುತ್ತಿರುವ ಭಾರತಕ್ಕೆ ನಾವು ಕೃತಜ್ಞರಾಗಿದ್ದೇವೆ. ಭಾರತ ನಮ್ಮ ಜೀವನ ರಕ್ಷಕ", ಎಂದು ಕೊಯಿರಾಲಾ ಬಾಯ್ತಂಬಾ ಹಿಂದೂಸ್ತಾನವನ್ನು ಹೊಗಳಿದ್ದಾರೆ. 
 
ಕಳೆದ 8 ದಿನಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಕ್ಕೆ ಇಲ್ಲಿಯವರೆಗೆ 6,000ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದು 10,000ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ