ಆಸ್ಟ್ರೇಲಿಯಾದಲ್ಲಿ ಮಹಿಳಾ ಟೆಕ್ಕಿ ಹತ್ಯೆಯಲ್ಲಿ ಭಾರತೀಯನ ಕೈವಾಡ ಶಂಕೆ

ಮಂಗಳವಾರ, 23 ಫೆಬ್ರವರಿ 2016 (10:48 IST)
ಆಸ್ಟ್ರೇಲಿಯಾದಲ್ಲಿ 41 ವರ್ಷದ ಮಹಿಳಾ ಟೆಕ್ಕಿಯ ನಿಗೂಢ ಹತ್ಯೆಗೆ ಸಂಬಂಧಿಸಿದಂತೆ ತನಿಖೆದಾರರು ಹೊಸ ಸುಳಿವನ್ನು ಪತ್ತೆಹಚ್ಚಿದ್ದಾರೆ. ಭಾರತದಲ್ಲಿರುವ ವ್ಯಕ್ತಿಯೊಬ್ಬರು ಟೆಕ್ಕಿಯ ಹತ್ಯೆಯಲ್ಲಿ ಕೈವಾಡ ನಡೆಸಿರಬಹುದೆಂದು ತನಿಖೆದಾರರು ಶಂಕಿಸಿದ್ದಾರೆ.  ಮೈಂಡ್ ಟ್ರೀ ಕಂಪನಿ ಮೂರು ವರ್ಷಗಳ ಡೆಪ್ಯೂಟೇಶನ್ ಮೇಲೆ ಕಳಿಸಿದ್ದ ಪ್ರಭಾ ಅರುಣ್ ಕುಮಾರ್ ಅವರು ಸಿಡ್ನಿಯಲ್ಲಿರುವ ತಮ್ಮ ಮನೆ ಕಡೆಗೆ ತೆರಳುತ್ತಿದ್ದಾಗ ಅಜ್ಞಾತ ದುಷ್ಕರ್ಮಿಯೊಬ್ಬ ಇರಿದು ಹತ್ಯೆ ಮಾಡಿದ್ದ.
 
ಸುಮಾರು 2000 ಜನರನ್ನು ಪೊಲೀಸರು ಪ್ರಶ್ನಿಸಿ ಒಟ್ಟು 250 ಹೇಳಿಕೆಗಳನ್ನು ದಾಖಲಿಸಲಾಗಿತ್ತು. ಪೊಲೀಸರ ತನಿಖೆಯ ಹಾದಿಯಲ್ಲಿ ಅರುಣ್ ಕುಮಾರ್ ಅವರಿಗೆ ಪರಿಚಿತರಾಗಿರುವ, ಭಾರತದಲ್ಲಿ ವಾಸಿಸುವ ವ್ಯಕ್ತಿ ಅವರ ಹತ್ಯೆಯಲ್ಲಿ ಕೈವಾಡ ನಡೆಸಿರಬಹುದೆಂದು ಪತ್ತೆಯಾಗಿದೆ.
 
ಆಸ್ಟ್ರೇಲಿಯಾದಿಂದ ಹೊರಗಿನಿಂದ ದುಷ್ಕರ್ಮಿ ಈ ಅಪರಾಧಕ್ಕೆ ನೆರವಾಗಿರುವ ಅಥವಾ ಭಾಗಿಯಾಗಿರುವ ಸಾಧ್ಯತೆಯನ್ನು ನಾವು ಪರಿಶೀಲಿಸಿದ್ದೇವೆ ಎಂದು ಡಿಟೆಕ್ಟಿವ್ ಸಾರ್ಜೆಂಟ್ ರಿಚಿ ಸಿಮ್ ಹೇಳಿದ್ದಾರೆ.
 
ಅಪರಾಧಿಗಳು ಈಗಲೂ ಆಸ್ಟ್ರೇಲಿಯಾದಲ್ಲಿರುವ ಅಥವಾ ಆಸ್ಟ್ರೇಲಿಯಾದಿಂದ ನಿರ್ಗಮಿಸಿರುವ ಸಾಧ್ಯತೆಯನ್ನೂ ನಾವು ಪರಿಶೀಲಿಸಿದ್ದೇವೆ ಎಂದು ಅವರು ಹೇಳಿದರು. 
ಅರುಣ್ ಕುಮಾರ್ ಅವರು ಪಾರಮಟ್ಟಾ ಪಾರ್ಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪತಿಯ ಜೊತೆ ಫೋನಿನಲ್ಲಿ ಮಾತನಾಡುವಾಗಲೇ ಅಜ್ಞಾತ ವ್ಯಕ್ತಿ ಅವರನ್ನು ಸಂಧಿಸಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಹತ್ಯೆಗೆ ಲೈಂಗಿಕ ದೌರ್ಜನ್ಯ ಅಥವಾ ದರೋಡೆ ಪ್ರೇರಣೆಯಾಗಿಲ್ಲವೆಂದು ತನಿಖೆದಾರರು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ