ಉತ್ತರ ಕೊರಿಯಾದ ಜಲಾಂತರ್ಗಾಮಿ ನಾಪತ್ತೆ

ಶನಿವಾರ, 12 ಮಾರ್ಚ್ 2016 (13:21 IST)
ಉತ್ತರ ಕೊರಿಯಾದ ಜಲಾಂತರ್ಗಾಮಿಯೊಂದು ನಾಪತ್ತೆಯಾಗಿದ್ದು,  ಜಂಟಿ ಸಮರಾಭ್ಯಾಸದಲ್ಲಿ ನಿರತವಾಗಿರುವ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಪಡೆಗಳ ವಿರುದ್ಧ ಪ್ರತೀಕಾರದ ಹೊಸ ಬೆದರಿಕೆಯನ್ನು  ಉತ್ತರ ಕೊರಿಯಾ ಒಡ್ಡಿದೆ.
 
ಈ ನೌಕೆಯು ಉತ್ತರ ಕೊರಿಯಾ ತೀರದಲ್ಲಿ ನಾಪತ್ತೆಯಾಗಿದ್ದು, ಸಿಯೋಲ್ ಈ ವರದಿ ಕುರಿತು ತನಿಖೆ ನಡೆಸುತ್ತಿದೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಪೆಂಟಗಾನ್ ಅಧಿಕಾರಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.  
 
 ನಾಪತ್ತೆಯಾದ ನೌಕೆ ನೀರಿನ ಮೇಲಿದೆಯೋ ಅಥವಾ ನೀರಿನಲ್ಲಿ ಮುಳುಗಿದೆಯೇ ಎಂಬ ಕುರಿತು ಅಮೆರಿಕಕ್ಕೆ ಖಚಿತತೆ ಇಲ್ಲ. ಆದರೆ ಅಭ್ಯಾಸದ ಸಂದರ್ಭದಲ್ಲಿ ಅದು ವೈಫಲ್ಯ ಅನುಭವಿಸಿರಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ. 
 
ಆದರೆ ಸಬ್‌ಮೆರಿನ್ ಮುಳುಗಿರಬಹುದು ಎಂಬ ಊಹಿಸಲಾಗಿದ್ದು, ಉತ್ತರ ಕೊರಿಯನ್ನರು ಏನೋ ತಪ್ಪಾಗಿದೆ ಎಂದು ಸೂಚಿಸುವ ಪ್ರಯತ್ನ ಮಾಡಿಲ್ಲ ಅಥವಾ ನೆರವಿಗಾಗಿ ಯಾಚಿಸಿಲ್ಲ ಎಂದು ಅಜ್ಞಾತ ಅಮೆರಿಕ ಅಧಿಕಾರಿಯೊಬ್ಬರು ತಿಳಿಸಿದರು.  ಸಬ್ ಮೆರಿನ್ ನಾಪತ್ತೆ ಪ್ರಕರಣದಿಂದ ಕೊರಿಯಾದ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದ್ದು, ಅಮೆರಿಕ ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸದಲ್ಲಿ ನಿರತವಾದ ಶತ್ರು ಪಡೆಗಳ ಮೇಲೆ ಮುನ್ನೆಚ್ಚರಿಕೆಯ ದಾಳಿಯನ್ನು ನಡೆಸುವ ಬೆದರಿಕೆಯನ್ನು ಉ.ಕೊರಿಯಾ ಒಡ್ಡಿರುವುದಾಗಿ ಮಿಲಿಟರಿ ಅಧಿಕಾರಿಗಳ ಹೇಳಿಕೆ ಉದಾಹರಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 
 

ವೆಬ್ದುನಿಯಾವನ್ನು ಓದಿ