ನೇಪಾಳ, ಉ. ಭಾರತದಲ್ಲಿ ಮತ್ತೆ ಭೂಕಂಪ...?!

ಭಾನುವಾರ, 26 ಏಪ್ರಿಲ್ 2015 (14:06 IST)
ನಿನ್ನೆಯಷ್ಟೇ ಭೂಕಂಪನ ಸಂಭವಿಸಿ ತತ್ತರಿಸಿ ಹೋಗಿದ್ದ ನೇಪಾಳ ಹಾಗೂ ಉತ್ತರ ಭಾರತದಲ್ಲಿ ಇಂದು ಮತ್ತೊಮ್ಮೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದ್ದು, ನೇಪಾಳವು ಮತ್ತಷ್ಟು ಹಾನಿಗೀಡಾಗಿದೆ.

ಮೂಲಗಳ ಪ್ರಕಾರ, ನೇಪಾಳ ರಾಜಧಾನಿ ಕಠ್ಮಂಡಿವಿನಿಂದ 117 ಕಿ ಮೀ ದೂರದಲ್ಲಿ ತೀವ್ರ ಪ್ರಮಾಣದ ಭೂ ಕಂಪನ ಸಂಭವಿಸಿದ್ದು, ಹೆಚ್ಚು ಹಾನಿ ಸಂಭವಿಸಿದೆ. ಅಲ್ಲದೆ ರಿಕ್ಟರ್ ಮಾಪನದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ. ಭೂಮಿಯಿಂದ 10 ಕಿ.ಮೀ ಆಳದಿಂದ ಈ ಅನಾಹುತ ಸಂಭವಿಸಿದ್ದು, ಇಲ್ಲಿನ ಕೊಡಾರಿ ಎಂಬ ಪ್ರದೇಶವು ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.  

ನಿನ್ನೆಯಿಂದೀಚೆಗೆ ಸಂಭವಿಸಿದ ಭೂಕಂಪದಲ್ಲಿ ಇದು ಎರಡನೇ ಬಾರಿಗೆ ಸಂಭವಿಸಿದ ಭಾರೀ ಪ್ರಮಾಣದ ಭೂಕಂಪ ಎನ್ನಲಾಗಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಗೊಳಗಾಗಿದ್ದು, ಮತ್ತಷ್ಟು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಇದೇ ವೇಳೆ, ಭಾರತದ ಹಲವು ರಾಜ್ಯಗಳ ಗಡಿಭಾಗಗಳು ಹೊಂದಿಕೊಂಡಿರುವ ಕಾರಣ ಅಸ್ಸಾಂ, ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಇತರೆಡೆಯೂ ಕೂಡ ಭೂಕಂಪನದ ಅನುಭವವಾಗಿದ್ದು, ಇಲ್ಲಿ 6.6ರಷ್ಟು ತೀವ್ರತೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಕಂಪನವು ಭಾರತೀಯ ಕಾಲಮಾನ 12.45ರ ಸುಮಾರಿನಲ್ಲಿ ಸಂಭವಿಸಿದೆ.  

ಇನ್ನು ನಿನ್ನೆ ಬೆಳಗ್ಗೆ 11.45ರ ವೇಳೆಯಲ್ಲಿ ಸಂಭವಿಸಿದ್ದ ಭೂಕಂಪನ ಪರಿಣಾಮ ನೇಪಾಳದಲ್ಲಿ 2000 ಮಂದಿ, ಭಾರತದಲ್ಲಿ 51 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ ಇಂದು ಮತ್ತೊಮ್ಮೆ ಭೂಕಂಪನ ಸಂಭವಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅನಾಹುತಕ್ಕೆ ನಾಂದಿಯಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.  

ಇದು ಒಂದೆಡೆಯಾದರೆ, ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದ್ದು, ನೇಪಾಳ ಹಾಗೂ ಭಾರತದ ಗಡಿಭಾಗದಲ್ಲಿನ ಹಿಮಾಲಯ ಪರ್ವತ ಶ್ರಣಿಯಲ್ಲಿ ದಟ್ಟವಾಗಿ ಹಿಮ ಹರಿಯುತ್ತಿದ್ದು, ಪರ್ವಾತಾರೋಹಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಇಲ್ಲಿನ ಮೌಂಟ್ ಎವರೆಸ್ಟ್‌ ಪರ್ವತದಲ್ಲಿ ಬೃಹತ್ ಗಾತ್ರದಲ್ಲಿ ಹಿಮಪಾತವಾಗುತ್ತಿದ್ದು, ಇಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನ ಜೆ.ಪಿ.ನಗರ ನಿವಾಸಿ, ಪರ್ವತಾರೋಹಿ ಪ್ರವೀಣ್ ಅವರೂ ಕೂಡ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಸಂಕಷ್ಟ ಎದುರಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ