ಐಎಸ್ಐಎಸ್ ನಿರ್ನಾಮ ನಮ್ಮ ಗುರಿ: ಒಬಾಮಾ ಘೋಷಣೆ

ಬುಧವಾರ, 21 ಜನವರಿ 2015 (09:35 IST)
ವಾಷಿಂಗ್ಟನ್: ಇಂದು ಇಲ್ಲಿನ ವಾಷಿಂಗ್ಟನ್ ಡಿಸಿಯಲ್ಲಿ ಒಬಾಮಾ ನೇತೃತ್ವದ ಅಮೆರಿಕಾ ಸರ್ಕಾರದ 6ನೇ ವಾರ್ಷಿಕ ಸಭೆ ನಡೆಯುತ್ತಿದ್ದು, ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ಐಎಸ್ಐಎಸ್ ಉಗ್ರ ಸಂಘಟನೆಯನ್ನು ನಿರ್ನಾಮಗೊಳಿಸುವುದೇ ನಮ್ಮ ಗುರಿ ಎಂದು ಘೋಷಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ನಿರುದ್ಯೋಗವೂ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಲ್ಲದೆ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಭಿಗಳಾಗುತ್ತಿದ್ದೇವೆ. ಇಂಧನಕ್ಕಾಗಿ ಇತರೆ ರಾಷ್ಟ್ರಗಳನ್ನು ಅವಲಂಭಿಸುವ ಅಗತ್ಯವಿಲ್ಲ ಎಂದಿದ್ದಾರೆ.

ನಮ್ಮ ಸರ್ಕಾರ ರಾಷ್ಟ್ರದಲ್ಲಿನ ಸಾರ್ವಜನಿಕರ ರಕ್ಷಣೆಗೆ ಬದ್ಧವಾಗಿದ್ದು, ಕಠಿಣ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಏಕೆಂದರೆ ರಾಷ್ಟ್ರದ ಜನರ ಸುರಕ್ಷತೆಯೇ ಸರ್ಕಾರದ ಆದ್ಯ ಕರ್ತವ್ಯ. ಅಂತೆಯೇ ನಮ್ಮ ರಾಷ್ಟ್ರದ ಸಾರ್ವಜನಿಕರಿಗೆ ಉಚಿತ ಅಂತರ್ಜಾಲ ಸೌಲಭ್ಯವನ್ನೂ ಕೂಡ ಶೀಘ್ರದಲ್ಲಿಯೇ ಒದಗಿಸಲಿದ್ದೇವೆ. ಅದನ್ನು ಯಾರಿಂದಲೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.  

ರಷ್ಯಾವು ನೆರೆ ರಾಷ್ಟ್ರವಾಗಿರುವ ಉಕ್ರೇನ್ ಮೇಲೆ ತನ್ನ ಉಗ್ರ ಪ್ರತಾಪ ಪ್ರದರ್ಶಿಸುತ್ತಿದ್ದು, ಅದು ಖಂಡನಾರ್ಹ. ರಷ್ಯಾದ ಈ ವರ್ತನೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ತೀವ್ರವಾಗಿ ಖಂಡಿಸಿದರು. ಇನ್ನು ಐಎಸ್ಐಎಸ್ ಸಂಘಟನೆಯು ಹಲವು ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಅದನ್ನು ಸಂಪೂರ್ಣವಾಗಿ ನೆಲಸಮ ಮಾಡುವುದು ನಮ್ಮ ಸರ್ಕಾರದ ಗುರಿ. ಈ ಹಿನ್ನಲೆಯಲ್ಲಿ ಇತರೆ ರಾಷ್ಟ್ರಗಳೊಂದಿಗೆ ಕೈ ಜೋಡಿಸಿ ನಿರ್ನಾಮ ಮಾಡಲಿದ್ದೇವೆ ಎಂದು ಘೋಷಿಸಿದರು.

ವೆಬ್ದುನಿಯಾವನ್ನು ಓದಿ