ಪಾಕ್‌ನಲ್ಲಿ 300ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರ ಬಂಧನ

ಭಾನುವಾರ, 21 ಡಿಸೆಂಬರ್ 2014 (18:11 IST)
ಪಾಕಿಸ್ತಾನದ ಸೇನಾ ಶಾಲೆಯಲ್ಲಿ ಅಮಾಯಕ ಮಕ್ಕಳನ್ನು ತಾಲಿಬಾನ್ ಉಗ್ರಗಾಮಿಗಳು ಕಗ್ಗೊಲೆ ಮಾಡಿದ ಘಟನೆ ಸಹಜವಾಗಿ ಪಾಕ್ ಸೇನೆಯಲ್ಲಿ ಆಘಾತದ ಅಲೆ ಎಬ್ಬಿಸಿದೆ. ಭಯೋತ್ಪಾದಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಪಾಕ್ ಮುಂದಾಗಿದ್ದು, ಈಗಾಗಲೇ ಶಿಕ್ಷೆ ಎದುರಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಗಲ್ಲಿಗೆ ಹಾಕಿದೆ.

 ಇಂದು ಕೆಲವು ವಿದೇಶಿಯರು ಸೇರಿದಂತೆ 300ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರನ್ನು ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಪೊಲೀಸ್ ನಾಯಿಗಳ ಆರು ತಂಡಗಳು, ಶಸ್ತ್ರಸಜ್ಜಿತ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಕಮಾಂಡೋಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು. ಉಗ್ರರ ಬೆದರಿಕೆಗಳ ಬಗ್ಗೆ ಗುಪ್ತಚರ ಮಾಹಿತಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಾದ್ಯಂತ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಇಬ್ಬರು ಬಂಧಿತ ಭಯೋತ್ಪಾದಕರನ್ನು ಗಲ್ಲಿಗೇರಿಸಿದ ಬಳಿಕ ಉಗ್ರರಿಂದ ಹೊಸ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು.ಆಫ್ಘನ್ ಬಿಡಾರಗಳು, ಬಸ್ ನಿಲ್ದಾಣಗಳು ಮತ್ತು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಡ ಭಯೋತ್ಪಾದಕರಿಗೆ ಶೋಧ ನಡೆಸಲಾಯಿತು. ಮರಣದಂಡನೆ ನಿಷೇಧ ಕೊನೆಗೊಳಿಸಿದ ನಂತರ ನಾವು ಅನೇಕ ಬೆದರಿಕೆಗಳನ್ನು ಎದುರಿಸಿದ್ದೇವೆ ಎಂದು ಅಧಿಕಾರಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ