ಹಳಿ ತಪ್ಪಿದ ರೈಲಿಗೆ ಬೆಂಕಿ : 5 ಸಾವಿರ ಜನರ ತೆರವು

ಶುಕ್ರವಾರ, 3 ಜುಲೈ 2015 (20:54 IST)
ವಿಷಕಾರಿ ರಾಸಾಯನಿಕಗಳನ್ನು ಒಯ್ಯುತ್ತಿದ್ದ ರೈಲೊಂದು ಟೆನ್ನಿಸ್ಸೀಯಲ್ಲಿ ಬುಧವಾರ ರಾತ್ರಿ ಹಳಿತಪ್ಪಿದ್ದರಿಂದ ರೈಲಿಗೆ ಬೆಂಕಿ ಹತ್ತಿಕೊಂಡಿದ್ದು, ಸಮೀಪದ ಮನೆಗಳಲ್ಲಿದ್ದ 5000 ಜನರನ್ನು ಸ್ಥಳಾಂತರಿಸಲಾಗಿದೆ.  ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದಾರೆ.

ನಾಕ್ಸ್‌ವಿಲ್ಲೆ ನಗರಕ್ಕೆ ಸಮೀರದ ಮೇರಿವಿಲ್ಲೆ ಬಳಿಕ ಮಧ್ಯರಾತ್ರಿ ವೇಳೆ ರೈಲು ಹಳಿತಪ್ಪಿತು. ರೈಲಿನಲ್ಲಿ ಅತ್ಯಂತ ದಹ್ಯ ಮತ್ತು ವಿಷಕಾರಿ ವಸ್ತುವಾದ  ಆಕ್ರಿಲೋನಿಟ್ರೈಲ್ ಸಾಗಿಸುತ್ತಿದ್ದು, ಅದು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ಅಗ್ನಿಶಾಮಕ ಅಧಿಕಾರಿ ಕೆರ್ಮಿಟ್ ಈಸ್ಟರ್ ಲಿಂಗ್ ತಿಳಿಸಿದರು. 
 
ರಾಸಾಯನಿಕದ ಹೊಗೆ ಸೇವಿಸಿ 25 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಯಾರೂ ಗಂಭೀರ ಅಸ್ವಸ್ಥತೆಗೆ ಒಳಗಾಗಿಲ್ಲವೆಂದು ಹೇಳಲಾಗಿದೆ.  ಅಗ್ನಿಶಾಮಕ ಸಿಬ್ಬಂದಿ ಉಸಿರಾಟದ ಉಪಕರಣ ಧರಿಸಿ ಮನೆಯಿಂದ ಮನೆಗೆ ತೆರಳಿ ಜನರನ್ನು ಬೆಂಕಿಯಿಂದ ದೂರ ಸಾಗಿಸುತ್ತಿದ್ದರು.  ತೆರವು ಮಾಡಿದ ನಿವಾಸಿಗಳಿಗೆ ಸ್ಥಳೀಯ ಶಾಲೆಯಲ್ಲಿ ರೆಡ್ ಕ್ರಾಸ್ ಶೆಲ್ಟರ್ ನಿರ್ಮಿಸಲಾಗಿದೆ.
 
ರೈಲು ಹಳಿ ತಪ್ಪಲು ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ರೈಲು ಎರಡು ಸರಕುಸಾಗಣೆ ಬೋಗಿಗಳು ಮತ್ತು 57 ಪ್ರಯಾಣಿಕ ಬೋಗಿಗಳಿಂದ ಕೂಡಿದ್ದು, 45 ಬೋಗಿಗಳು ತುಂಬಿದ್ದರೆ 12 ಖಾಲಿಯಾಗಿದ್ದವು. ಆಕ್ರಿಲೋನಿಟ್ರೈಲ್ ಅನೇಕ ಕೈಗಾರಿಕೆ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತಿದ್ದು, ಪ್ಲಾಸ್ಟಿಕ್ಸ್ ಉತ್ಪಾದನೆ ಕೂಡ ಸೇರಿದೆ. 

ವೆಬ್ದುನಿಯಾವನ್ನು ಓದಿ