ಶಾಲೆಗೆ ಹೋಗದೆ ಬದುಕುಳಿದ ದಾವೂದ್ ಇಬ್ರಾಹಿಂ!

ಗುರುವಾರ, 18 ಡಿಸೆಂಬರ್ 2014 (11:18 IST)
ಅಂದು ಸಂಜೆ ಕೊನೆಯ ತರಗತಿ ಮುಗಿಸಿ ಅವರೆಲ್ಲರೂ ಮನೆಗೆ ಹೊರಟಿದ್ದರು. 9ನೇ ತರಗತಿ ಬಾಲಕ ದಾವೂದ್ ತನ್ನ ಸ್ನೇಹಿತರಿಗೆ ಎಂದಿನಂತೆ 'ಬಾಯ್' ಹೇಳಿ ಮನೆ ಕಡೆ ಹೊರಟ. ಆದರೆ ಅದು ತನ್ನ ಸ್ನೇಹಿತರ ಶಾಶ್ವತ ವಿದಾಯ ಎಂಬ ಸತ್ಯ ಅವನಿಗೆ ಹೇಗೆ ತಿಳಿಯಬೇಕು. ಅಂದು ಆತ ಧಾವಂತದಲ್ಲಿದ್ದ. ಸಂಬಂಧಿಕರ ಮನೆಯಲ್ಲಿ ನಡೆಯಲಿದ್ದ ಸಮಾರಂಭಕ್ಕೆ ಹೋಗುವ ಸಂಭ್ರಮದಲ್ಲಿದ್ದ.
ಅದು ತನ್ನ ಪ್ರೀತಿಯ ಸ್ನೇಹಿತರೊಂದಿಗಿನ ಕೊನೆಯ ದಿನವೆಂದು ಅತನಿಗೆ ತಿಳಿದಿರಲಿಲ್ಲ. ಅವರನ್ನು ಇನ್ನೆಂದು ನಾ ಜೀವಂತ ನೋಡಲಾರೆ ಎಂದು ಆ ಮುಗ್ಧ ಬಾಲಕನಿಗೆ ಲವಲೇಶವೂ ತಿಳಿದಿರಲಿಲ್ಲ. ತನ್ನ ಶಾಲೆಯ 9 ನೇ ತರಗತಿಯಲ್ಲಿ ಇನ್ನು ಮುಂದೆ ತಾನೊಬ್ಬನೇ ವಿದ್ಯಾರ್ಥಿ ಎಂಬ ಭೀಕರ ಭವಿಷ್ಯ ಅವನಿಗೆಲ್ಲಿಂದ ಅರಿವಾಗಬೇಕು?
 
ಪೇಶಾವರದ ಸೈನಿಕ ಶಾಲೆಯಲ್ಲಿ 130 ಕ್ಕೂ ಹೆಚ್ಚು ಅಮಾಯಕ ಮಕ್ಕಳು ಬಲಿಯಾಗಿ ಹೋದರು. ಈ ಭೀಕರ ದಾಳಿಯಲ್ಲಿ ಒಬ್ಬ ಹುಡುಗ ಬದುಕುಳಿದ. 9 ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗ ಈಗ ತನ್ನ ತರಗತಿಗೆ ಒಬ್ಬನೇ ವಿದ್ಯಾರ್ಥಿಯಾಗಿದ್ದಾನೆ. ಆತನ ಸಹಪಾಠಿಗಳೆಲ್ಲರೂ ಗುಂಡಿನ ದಾಳಿಗೆ ಹತರಾಗಿದ್ದಾರೆ. ಆದರೆ ಆತ ಬದುಕುಳಿದಿದ್ದಾನೆ. ಅಷ್ಟಕ್ಕೂ ಆ ಕ್ರೂರಿಗಳ ಕೈಯ್ಯಿಂದ ಆತ ಹೇಗೆ ಬದುಕುಳಿದ...
 
ಹಿಂದಿನ ದಿನ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ತಡರಾತ್ರಿ ಮನೆಗೆ ಮರಳಿದ್ದ  15 ವರ್ಷದ ಬಾಲಕ ದಾವೂದ್ ಇಬ್ರಾಹಿಂ ಮರುದಿನ ತುಸು ಜಾಸ್ತಿಯೇ ನಿದ್ದೆಗೆ ಜಾರಿದ. ವಿಳಂಬವಾಯಿತೆಂದು ಶಾಲೆಗೆ ಹೋಗದಿರಲು ನಿರ್ಧರಿಸಿದ. ಅಂದು ಆತ ಮನೆಯಲ್ಲೇ ಉಳಿದುಕೊಂಡ. ಹಾಗಾಗಿ ಬದುಕಿಕೊಂಡ. 
 
ಮತ್ತೆ ಶಾಲೆಗೆ ಹೋಗುವ ಕುರಿತು ಯೋಚಿಸಲು ಆತನಿಗೆ ಭಯವಾಗುತ್ತಿದೆ. ಆತ ಮೌನಕ್ಕೆ ಶರಣಾಗಿದ್ದಾನೆ. ಸ್ನೇಹಿತರನ್ನು, ಶಿಕ್ಷಕರನ್ನು ನೆನೆದು ಆತನ ಕಣ್ಣಿನಿಂದ ನೀರು ಜಿನುಗುತ್ತದೆ..ಒಮ್ಮೊಮ್ಮೆ ಭೋರ್ಗರೆದು ಅಳುತ್ತಾನೆ.... ಆತನ ತರಗತಿಯಲ್ಲಿ ಚೆಲ್ಲಿರುವ ಆತನ ಸ್ನೇಹಿತರ ರಕ್ತ ಇನ್ನೂ ಹಸಿಯಾಗಿಯೇ ಇದೆ......

ವೆಬ್ದುನಿಯಾವನ್ನು ಓದಿ