ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನದ ರಾಷ್ಟ್ರಪತಿಯಂತೆ..!

ಶನಿವಾರ, 25 ಅಕ್ಟೋಬರ್ 2014 (17:21 IST)
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಅಧ್ಯಕ್ಷ ಮನಮೋಹನ್ ಸಿಂಗ್ ಮುಂದಿನ ವಾರ ನಡೆಯಲಿರುವ  ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪಾಕಿಸ್ತಾನಿ ಎಕಾನಾಮಿಕ್ ಇನ್‌ಸ್ಟಿಟ್ಯೂಟ್ ಸಂಸ್ಥೆ ಆಹ್ವಾನ ನೀಡಿ ದಿಗ್ಬ್ರಮೆಗೊಳಿಸಿದ ಘಟನೆ ವರದಿಯಾಗಿದೆ.
 
ರಾಜಧಾನಿಯಲ್ಲಿರುವ ಪಾಕಿಸ್ತಾನಿ ಇನ್‌ಸ್ಟಿಟ್ಯೂಟ್ ಆಫ್ ಡೆವಲೆಪ್‌ಮೆಂಟ್ ಎಕಾನಾಮಿಕ್ಸ್‌ ಸಂಸ್ಥೆ ಆಕ್ಟೋಬರ್ 28 ರಂದು ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಪಾಕ್ ರಾಷ್ಟ್ರಪತಿ ಮಮ್‌ನೂನ್ ಹುಸೈನ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನ ನೀಡಲು ಬಯಸಿತ್ತು.
 
ಸಂಸ್ಥೆ ಮುದ್ರಿಸಿದ ಆಹ್ವಾನ ಪತ್ರಿಕೆಯಲ್ಲಿ ಮಮ್‌ನೂನ್ ಹುಸೈನ್ ಬದಲಿಗೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ ರಾಷ್ಟ್ರಪತಿ ಎಂದು ಮುದ್ರಿಸಿ ಎಡವಟ್ಟು ಮಾಡಿಕೊಂಡಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಪಾಕಿಸ್ತಾನಿ ಇನ್‌ಸ್ಟಿಟ್ಯೂಟ್ ಆಫ್ ಡೆವಲೆಪ್‌ಮೆಂಟ್ ಎಕಾನಾಮಿಕ್ಸ್‌ ಸಂಸ್ಥೆ(ಪಿಐಡಿಇ) ತಾನು ಎಸಗಿದ ಗಂಭೀರ ಲೋಪವನ್ನು ನಂತರ ಸರಿಪಡಿಸಿಕೊಂಡಿತು. ಆದರೆ, ತಪ್ಪು ಸರಿಪಡಿಸಿಕೊಳ್ಳುವ ಮುನ್ನವೇ ಕಾಲ ಮಿಂಚಿ ಹೋಗಿತ್ತು. ಅದಾಗಲೇ ದೇಶದ ನೂರಾರು ವಿಐಪಿಗಳಿಗೆ ಆಹ್ವಾನ ಪತ್ರಿಕೆಗಳನ್ನು ರವಾನಿಸಲಾಗಿತ್ತು 
 
ಘಟನೆಯ ಕುರಿತಂತೆ ಪಿಐಡಿಇ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವೆಬ್ದುನಿಯಾವನ್ನು ಓದಿ