ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆ ಭಾರತದ ಕುತ್ತಿಗೆಗೆ ಕೈ ಹಾಕಿತ್ತು: ಮುಷರ್ರಫ್‌

ಸೋಮವಾರ, 18 ಮೇ 2015 (17:01 IST)
ಪಾಕಿಸ್ತಾನದ ಮಾಜಿ ಸೇನಾ ಸರ್ವಾಧಿಕಾರಿ ಪರ್ವೇಜ್‌ ಮುಷರ್ರಫ್‌ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಕೈ ಮೇಲಾಗಿತ್ತು ಎನ್ನುವ ಅರ್ಥದಲ್ಲಿ  ಹೇಳಿಕೆಯನ್ನು ನೀಡಿದ್ದಾರೆ. ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನ ಸೇನೆ ಭಾರತದ ಕುತ್ತಿಗೆ ಹಿಡಿದಿತ್ತು, ಆ ಯುದ್ಧವನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮುಷರ್ರಫ್‌ ಹೇಳಿದ್ದಾರೆ. 

ಅಖಿಲ ಪಾಕಿಸ್ತಾನ ಮುಸ್ಲಿಂ ಲೀಗ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮುಷರ್ರಫ್‌ , 'ಯೋಧರನ್ನು ಹೊರತು ಪಡಿಸಿ ಎರಡನೇ ದರ್ಜೆ ಪೋರ್ಸ್ ಕೂಡ ನಮ್ಮಲ್ಲಿತ್ತು. ಅದು ನೇರವಾಗಿ ಭಾರತದ ಕುತ್ತಿಗೆಗೆ ಕೈ ಹಾಕಿತ್ತು . ಅದರ ಈ ಸಾಧನೆಯನ್ನು ಮೆಚ್ಚಿ ಅದಕ್ಕೆ ಸೇನೆಯ ಸ್ಥಾನಮಾನ ನೀಡಲಾಯಿತು' ಎಂದು ಕುಟುಕಿದ್ದಾರೆ. 
 
'ನಾಲ್ಕು ಕೇಂದ್ರಗಳಿಂದ ನಾವು ಕಾರ್ಗಿಲ್‌ ಪ್ರವೇಶಿಸಿದ್ದೆವು. ಆದರೆ, ಭಾರತಕ್ಕೆ ಇದರ ಅರಿವಿರಲಿಲ್ಲ' ಎಂದು 1999ರ ಕಾರ್ಗಿಲ್ ಯುದ್ಧದ ಪ್ರಮುಖ ರೂವಾರಿ ಮುಷರ್ರಫ್‌ ಹೇಳಿದ್ದಾರೆ ಎಂದು ಪಾಕ್ ಪತ್ರಿಕೊಂದು ವರದಿ ಮಾಡಿದೆ. 
 
ಉಗ್ರರ ಬೆಂಬಲದ ಜತೆಗೆ ಪಾಕಿಸ್ತಾನಿ ಸೈನಿಕರು ಕಾರ್ಗಿಲ್‌ ಪರ್ವತ ಶ್ರೇಣಿಯನ್ನು ಆಕ್ರಮಿಸಿಕೊಂಡ ನಂತರ 1999 ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಜಮ್ಮುಕಾಶ್ಮೀರದ ಲಡಾಕ್‌ನ ಕಾರ್ಗಿಲ್‌ ಪ್ರದೇಶದಲ್ಲಿ ಯುದ್ಧ ನಡೆದಿತ್ತು.
 
ದೇಶದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ರಾಜಕೀಯ ಪಕ್ಷ ಕಣಕ್ಕಿಳಿಯುವುದಾಗಿ ಅವರು ಘೋಷಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ